ಮಕ್ಕಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

ಕಾರಟಗಿ: ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಕೆಯಲ್ಲ, ನಾಡಿನ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿ ಅವರ ಗುಪ್ತ ಪ್ರತಿಭೆಯನ್ನು ಆವರಣ ಮಾಡುತ್ತದೆ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ ಹೇಳಿದರು.

ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಶನಿವಾರ ಪ್ರಾರಂಭವಾದ ಪ್ರೌಢಶಾಲೆ ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-26 ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಎಂದರೆ ಕೇವಲ ಅಕ್ಷರ ಕಲಿಸಲು ಅಲ್ಲ, ಮಕ್ಕಳು ಕೇವಲ ಅಕ್ಷರ ಕಲಿಯಲು ಇಲ್ಲ. ಮಕ್ಕಳ ಮಾನಸಿಕ, ಅಕ್ಷರ ಕಲಿಕೆ, ವ್ಯಕ್ತಿತ್ವ ರೂಪಿಸಿ, ಬಾಳುವ ದಾರಿ ತೋರಿಸುವ ವ್ಯಕ್ತಿಯೇ ಶಿಕ್ಷಕ. ಈ ದೇಶದ ಪ್ರತಿಯೊಂದು ಮಗುವನ್ನು ಅಧಿಕಾರಿ, ರಾಜಕಾರಣಿ, ರೈತ, ವಕೀಲ, ಪತ್ರಕರ್ತ, ತಂತ್ರಜ್ಞಾನಿ, ವಿಜ್ಞಾನಿ ಮಾಡುವ ಕೆಲಸ ಮತ್ತು ಜವಾಬ್ದಾರಿ ಶಿಕ್ಷಕರೊಬ್ಬರ ಮೇಲಿದೆ. ಹೀಗಾಗಿ ಈ ದೇಶದಲ್ಲಿ ಶಿಕ್ಷಕನಿಗೆ ಬಹುದೊಡ್ಡ ಗೌರವವಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಮಕ್ಕಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಸಾಂಸ್ಕೃತಿಕ ಸ್ಪರ್ಧೆಗಳನ್ನು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಎಲ್ಲ ಮಕ್ಕಳು ಮುಕ್ತವಾಗಿ ನಿಮ್ಮ ಕಲೆಯನ್ನು ಪ್ರದರ್ಶನ ಮಾಡಿ. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ತಹಸೀಲ್ದಾರ್ ಎಂ. ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ದೇವಪ್ಪ ಬಾವಿಕಟ್ಟಿ, ಸೋಮನಾಥ ದೊಡ್ಡಮನಿ, ಪುರಸಭೆ ಸದಸ್ಯರಾದ ಸೌಮ್ಯಾ ಕಂದಗಲ್, ದೊಡ್ಡಬಸವರಾಜ ಬೂದಿ, ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಅನಂತಕುಮಾರ, ಹನುಮಂತಪ್ಪ ತೊಂಡಿಹಾಳ, ವಿಠ್ಠಲ ಜೀರಗಾಳಿ ಇದ್ದರು.

ಸಂಪ್ರತಿ ಶಿಕ್ಷಕರ ಕಲಾ ಬಳಕ ನಾಡಗೀತೆ ಮತ್ತು ರೈತ ಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಟೇಶ ಲಿಂಗಾರೆಡ್ಡಿ ಆಲೂರು ಮತ್ತು ಶ್ರೀನಿವಾಸ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

ಕೊಪ್ಪಳ ನೆಲದಲ್ಲಿ ಯಶಸ್ಸು ಕಂಡಿವೆ: ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸೋಮಶೇಖರ ಗೌಡ, ಕೊಪ್ಪಳ ಜಿಲ್ಲೆ ಐತಿಹಾಸಿಕ ನೆಲ. ಇಲ್ಲಿನ ಮಣ್ಣು, ನೀರು ಕಲ್ಲು ವಿಶ್ವ ಪ್ರಸಿದ್ಧ. ಈ ನೆಲದಲ್ಲಿ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಯಶಸ್ಸು ಕಂಡಿವೆ. ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಉತ್ತಮವಾಗಿದೆ ಎಂದು ರೂಪಿಸಲು ಈ ರಾಜ್ಯಮಟ್ಟದ ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲಾಡಳಿತದ ಸಹಕಾರದಿಂದ ರೂಪಿಸಲಾಗಿದೆ. ಕೊಪ್ಪಳ ಅತ್ಯಂತ ಶ್ರೀಮಂತ ಜಿಲ್ಲೆ ಎಂದು ಈ ಕಾರ್ಯಕ್ರಮ ನಿರೂಪಿಸುತ್ತದೆ ಎಂದರು. ನಾಡಿನ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 1500 ಜನರ ಈ ಕಲೋತ್ಸವದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನ ಮಕ್ಕಳ ಕಲರವ ಇರಲಿದೆ ಎಂದರು.

ಗಮನ ಸೆಳೆದ ನೃತ್ಯ: ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದಾಪುರದ ಕೆಜಿಬಿ ಉರ್ದು ಬಾಲಿಕ ಶಾಲೆ ಮಕ್ಕಳ ವರಹಾ ರೂಪಂ ಹಾಡಿನ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು. ನೃತ್ಯವನ್ನು ಮಕ್ಕಳು ಅಚ್ಚುಕಟ್ಟಾಗಿ ಮಾಡಿ, ಎಲ್ಲರೂ ವನ್ಸ್ ಮೋರ್ ವನ್ಸ್ ಮೋರ್ ಎನ್ನುವಂತೆ ಮಾಡಿದರು. ನೃತ್ಯ ಮುಗಿದ ಬಳಿಕ ವೇದಿಕೆ ಮೇಲಿದ್ದ ಅಧಿಕಾರಿಗಳು ಮತ್ತು ಗಣ್ಯರು ನೃತ್ಯ ಬಾಲೆಯರೊಂದಿಗೆ ಕ್ಯಾಮೆರಾಕ್ಕೆ ಫೋಸ್ ಕೊಟ್ಟು, ಮಕ್ಕಳ ಬೆನ್ನು ತಟ್ಟಿದರು.

ಹೋಳಿಗೆ ತುಪ್ಪ: ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳ ನಡುವೆ ಊಟದ್ದೆ ಸುದ್ದಿ. ಶನಿವಾರ ಬೆಳಗ್ಗೆ ತಿಂಡಿಗೆ ಕೇಸರಿ ಬಾತ್ ಮತ್ತು ಉಪ್ಪಿಟ್ಟು, ಜತೆಗೆ ಅವಲಕ್ಕಿ ಚೂಡಾ, ಟೀ ಮತ್ತು ಕಾಫಿ. ಮಧ್ಯಾಹ್ನ ಹೋಳಿಗೆ ಊಟ. ಹೋಳಿಗೆ ಮತ್ತು ತುಪ್ಪ, ಹೀರೇಕಾಯಿ ಪಲ್ಲೆ, ಅನ್ನ ಸಾಂಬರ್, ಕಡ್ಲೆಪುಡಿ, ಉಪ್ಪಿನಕಾಯಿ ಮತ್ತು ಮಜ್ಜಿಗೆ ಉಣಿಬಡಿಸಲಾಯಿತು. ಇಂದಿನ ಊಟಕ್ಕೆ ಒಟ್ಟು 3-4 ಕ್ವಿಂಟಲ್ ಅಕ್ಕಿ ಬಳಕೆ ಮಾಡಿದ್ದರೆ, ನಾಲ್ಕು ಸಾವಿರ ಹೋಳಿಗೆ ತಯಾರಿಸಲಾಗಿತ್ತು ಎಂದು ಊಟದ ಉಸ್ತುವಾರಿ ಹೊತ್ತ ಉದ್ಯಮಿ ಜಗದೀಶ ಅವರಾಧಿ ಮತ್ತು ಮಲ್ಲಿಕಾರ್ಜುನ ಕೊಟಗಿ ವಿವರಿಸಿದರು.