ಸಾರಾಂಶ
ಗಜೇಂದ್ರಗಡ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಸೋಲು, ಗೆಲುವು ಎನ್ನದೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಶಿಕ್ಷಕ ಪ್ರಭುರಾಜ್ ನಾಯಕರ ಹೇಳಿದರು.
ತಾಲೂಕಿನ ಲಕ್ಕಲಕಟ್ಟಿ ಗ್ರಾಪಂ ವ್ಯಾಪ್ತಿಯ ನಾಗೇಂದ್ರಗಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯದ ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ, ಕಲೆ, ಸಾಹಿತ್ಯ, ಜಾನಪದ, ನಾಟಕಗಳಂತಹ ನಾಡಿನ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಮೂಲಕ ಉಳಿಸಿ, ಬೆಳೆಸಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭಾ ಶಕ್ತಿ ಗುರುತಿಸುವಲ್ಲಿ ಪೋಷಕರು ನಮ್ಮೊಂದಿಗೆ ಕೈಜೋಡಿಸಬೇಕು ಎಂದ ಅವರು, ೨೦೦೨ರಿಂದಲೂ ಪ್ರತಿಭಾ ಕಾರಂಜಿಯನ್ನು ಶಾಲೆಗಳಲ್ಲಿ ಆಯೋಜಿಸುತ್ತಿದ್ದು, ಸರ್ಕಾರವು ಮಕ್ಕಳ ಕ್ರಿಯಾಶೀಲ ಅಭಿವೃದ್ಧಿಗೆ ಪೂರಕವಾಗಿ ಶೈಕ್ಷಣಿಕ ಹಂತದಲ್ಲಿ ಸಾಕಷ್ಟು ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಜ್ಞಾನ ಮತ್ತು ಸಾಮಾಜಿಕ ಮೌಲ್ಯ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡೂ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಕಲೆ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಕ್ತ ಅವಕಾಶ ಸಿಗಲಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಮಕ್ಕಳಲ್ಲಿರುವ ಸಾಂಸ್ಕೃತಿಕ ಪ್ರತಿಭೆಗೂ ಹೆಚ್ಚು ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಶಿಕ್ಷಕಿ ಎ.ಬಿ. ಹೊಸಮನಿ ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಗಳಲ್ಲೂ ವಿಭಿನ್ನ ಸೃಜನಶೀಲ ಕಲೆಗಳಿದ್ದು, ಅವುಗಳನ್ನು ಒರೆಹಚ್ಚುವ ಅತ್ಯುತ್ತಮ ವೇದಿಕೆ ಕಲೋತ್ಸವವಾಗಿದೆ. ಮಕ್ಕಳ ಶೈಕ್ಷಣಿಕ ಕಲಿಕೆ ಪರಿಣಾಮಕಾರಿಯಾಗಿಸುವಲ್ಲಿ ಪ್ರತಿಭಾಕಾರಂಜಿ ಪೂರಕವಾಗಿ ಕೆಲಸ ಮಾಡುತ್ತದೆ ಎಂದ ಅವರು, ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮಕ್ಕಳಿಗೆ ಸರ್ಕಾರ ಪ್ರೋತ್ಸಾಹದಾಯಕ ಯೋಜನೆಗಳ ಜಾರಿಗೆ ತಂದು ಅವರನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಬೇಕು ಎಂದರು.ಎಫ್.ಎಫ್. ದೊಡ್ಡಮನಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಮುಖ್ಯ ವೇದಿಕೆಯಾಗಿದೆ. ಅದನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಅಂಬೋರೆ, ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಚಿನ್ನೂರ, ಎಸ್.ಎ. ಜಿಗಳೂರು, ಎಸ್.ಕೆ.ಮಠದ, ಈರಣ್ಣ ಅಬ್ಬಿಗೇರಿ ಸೇರಿದಂತೆ ಇತರರು ಇದ್ದರು.