ಮಕ್ಕಳಲ್ಲಿನ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸಹಕಾರಿ

| Published : Aug 30 2024, 01:10 AM IST

ಸಾರಾಂಶ

ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಯ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತೇರದಾಳ ಪಶ್ಚಿಮ ವಲಯದ ಸಿಆರ್ಪಿ ಅನಂತರಾಜು ಮುಧೋಳ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಯ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತೇರದಾಳ ಪಶ್ಚಿಮ ವಲಯದ ಸಿಆರ್‌ಪಿ ಅನಂತರಾಜು ಮುಧೋಳ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಜಿಪಂ ಬಾಗಲಕೋಟೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಾಲಯ ಜಮಖಂಡಿ, ಸಮೂಹ ಸಂಪನ್ಮೂಲ ಕೇಂದ್ರ ತೇರದಾಳ ಪಶ್ಚಿಮ ವಲಯದ ೨೦೨೪-೨೫ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಹಾಗೂ ಪೋಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಅಲ್ಲದೆ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ ಹಾಗೂ ಸ್ಪರ್ಧಾ ಮನೋಭಾವವನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದರು.

ಬಿಆರ್‌ಪಿ ರಮೇಶ ಅವಟಿ ಮಾತನಾಡಿ, ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿ ಉದ್ದೇಶ. ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ. ವಿದ್ಯಾರ್ಥಿಗಳಲ್ಲಿನ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದೊಂದು ಉತ್ತಮವಾದ ವೇದಿಕೆಯಾಗಿದೆ. ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಗಟ್ಟಿಗೊಳಿಸುವ ಮನೋರಂಜನಾತ್ಮಕ ಕಾರ್ಯಕ್ರಮ ಇದಾಗಿದೆ ಎಂದರು.

ವೇದಿಕೆಯಲ್ಲಿ ಡಿ.ಬಿ.ಪಾಟೀಲ, ಮಹಾವೀರ ನಂದಗಾವಿ, ಕೆ.ಡಿ.ಮಾಲಗಾವಿ, ಲಕ್ಷ್ಮೀ ಮಾಳಿ ಸೇರಿದಂತೆ ತೇರದಾಳ ಪಶ್ಚಿಮ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಧನಂಜಯ ಜಮಖಂಡಿ ನಿರೂಪಿಸಿದರು. ಗಂಗಾಧರ ಮೋಪಗಾರ ಸ್ವಾಗತಿಸಿದರು. ಪಿ.ಬಿ.ಹವಾಲ್ದಾರ ವಂದಿಸಿದರು.