ಸಾರಾಂಶ
ಲಕ್ಷ್ಮೇಶ್ವರ: ನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸುವ ಜತೆಗೆ ಮುಂದಿನ ಪೀಳಿಗೆಗೆ ದಾಟಿಸುವ ಮಹಾನ್ ಉದ್ದೇಶದಿಂದ ಪ್ರತಿಭಾ ಕಾರಂಜಿ ಅನುಷ್ಠಾನಗೊಳಿಸಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ, ಕಲೆ ಸಂಸ್ಕೃತಿ ಮತ್ತು ಪರಂಪರೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ.02 ರಲ್ಲಿ ನಡೆದ ಲಕ್ಷ್ಮೇಶ್ವರ ಉರ್ದು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಭಾ ಕಾರಂಜಿ ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿಗೆ ಸಾಮಾನ್ಯ ವೇದಿಕೆ ಒದಗಿಸುತ್ತದೆ, ಇದರಲ್ಲಿ ಯಶಸ್ವಿ ಮಕ್ಕಳಿಗೆ ಪ್ರಶಂಸಾಪತ್ರಗಳು ಮತ್ತು ಬಹುಮಾನ ನೀಡಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ನಿವೃತ್ತ ಜಿಲ್ಲಾ ಉಪನಿರ್ದೇಶಕ ಜಿ. ಬಸಲಿಂಗಪ್ಪ ಹಾಗೂ ಐ.ಬಿ. ಬೆನಕೊಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿವೆ. ನಶಿಸಿ ಹೋಗುತ್ತಿರುವ ನಾಡಿನ ಸಾಂಸ್ಕೃತಿಕ, ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಅಧ್ಯಯನ, ಅಭ್ಯಾಸಗಳ ಮೂಲಕ ಸ್ಪರ್ಧಾ ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಜತೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 9 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಬಿಇಓ ಎಚ್.ನಾಣಕಿ ನಾಯಕ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರದೋಸ್ ಆಡೂರ, ಶಾಲೆಯ ಎಸಡಿಎಂಸಿ ಅಧ್ಯಕ್ಷ ಮಹ್ಮದ್ ರಫೀಕ್ ಕುಡಚಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ.ಹವಳದ, ಬಿ.ಆರ್ ಪಿ ಈಶ್ವರ ಮೆಡ್ಲೇರಿ, ಬಿ.ಎಂ.ಯರಗುಪ್ಪಿ, ಮುಖ್ಯ ಶಿಕ್ಷಕ ಐ.ಎ.ನೀರಲಗಿ, ಮುಕ್ತಿಯಾರ ಅಹ್ಮದ್ ಗದಗ, ಎಸ್.ಕೆ. ಕಣಕೆ, ಅಬ್ದುಲ್ ಕರೀಮ ಕರಿಮಖಾನವರ, ದಾದಾಪೀರ್ ಮುಚ್ಚಾಲೆ, ಮೈನುದ್ದೀನ್ ಆಡೂರ, ಮೈನುದ್ದೀನ್ ಸೂರಣಗಿ, ಅಖ್ತರ್ ಹಗಲದಿವಟಗಿ, ಶಾಹಿದ್ ಲೋಹಾರ್, ಕ್ಲಸ್ಟರ್ ಸಿಆರ್‌ಪಿ ಎನ್ ಎ ಮುಲ್ಲಾ, ಎಸ್.ಎಂ.ಬೋಮಲೆ, ಸಿ.ವಿ.ವಡಕಣ್ಣವರ, ಉಮೇಶ ನೇಕಾರ, ಗಿರೀಶ್ ನೇಕಾರ, ಜ್ಯೋತಿ ಗಾಯಕವಾಡ, ನವೀನ ಅಂಗಡಿ, ಶಾಲಾ ಶಿಕ್ಷಕ ಝಡ್.ಎಂ. ಖಲೀಫನವರ, ಎ.ಎ.ಇನಾಮದಾರ, ನಶೀಮಾ ಭಾನು, ಶಿಲ್ಪಾ ಅಳವಂಡಿ,ರೇಷ್ಮಾ ಬೆಣಗಿ, ಎಸ್.ವೈ.ತಾಡತ್ರಿ, ಬಸರಿಯಾ ಹುಲಗೇರಿ, ಎಸ್.ವಿ.ಕಾಕೋಳ ಹಾಗೂ ಕ್ಲಸ್ಟರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಕ್ಷ್ಮೇಶ್ವರ ಸಿಆರ್ ಪಿ ನಜೀರ್ ಅಹ್ಮದ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಎ.ಐ.ಮಿಯಾನವರ ನಿರೂಪಿಸಿದರು.ಎ.ಎಂ.ಗುತ್ತಲ ಸ್ವಾಗತಿಸಿದರು. ಎಚ್.ಬಿ.ಪಟ್ಟಣದ ವಂದಿಸಿದರು.