ಸಾರಾಂಶ
- ಅಣಬೂರಲ್ಲಿ ಕ್ಲಸ್ಟರ್ ಹಂತ ವಿಜೇತ ಮಕ್ಕಳಿಗೆ ಪುರಸ್ಕಾರ - - - ಕನ್ನಡಪ್ರಭ ವಾರ್ತೆ ಜಗಳೂರು
ಪ್ರತಿಭಾ ಕಾರಂಜಿ ಸ್ಪರ್ಧೆಯು ವಿದ್ಯಾರ್ಥಿಗಳ ಪಠ್ಯೇತರ ಪ್ರತಿಭೆ, ಜಾಣತನ, ಬುದ್ಧಿಮತ್ತೆ ಬೆಳಗಲು ಅವಕಾಶ ಕಲ್ಪಿಸುವ ಉತ್ತಮ ವೇದಿಕೆಯಾಗಿದೆ ಎಂದು ಅಣಬೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್ ಹೇಳಿದರು.ಅಣಬೂರು ಗುರುಸಿದ್ದನಗೌಡ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ವಿಜೇತ ಮಕ್ಕಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಟ, ಹಾಡು, ನತ್ಯ, ಕಥೆ ಹೇಳುವುದು, ಭಾಷಣ, ಸಂಗೀತ, ಸಾಮಾನ್ಯ ಜ್ಞಾನ ಮುಂತಾದ ರಂಗದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕ ಜ್ಞಾನದೊಂದಿಗೆ ಪಠ್ಯೇತರ ಪ್ರತಿಭೆ ಇದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ಸಿಗುವುದು ಎಂದು ತಿಳಿಸಿದರು.ಮುಖ್ಯ ಶಿಕ್ಷಕ ಕೆ.ಎಸ್. ರವಿಕುಮಾರ್ ಮಾತನಾಡಿ, ಪ್ರತಿಭೆ ಎನ್ನುವುದು ಯಾರ ಸ್ವತ್ತೂ ಅಲ್ಲ. ಎಲ್ಲ ವಿದ್ಯಾರ್ಥಿಗಳಲ್ಲಿ ಒಂದಿಲ್ಲೊಂದು ಪ್ರತಿಭೆ, ಜಾಣತನ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾದ್ದು ಶಿಕ್ಷಕರು, ಪಾಲಕರು ಹಾಗೂ ಸಮಾಜದ ಕರ್ತವ್ಯ. ಸ್ಪರ್ಧೆಯಲ್ಲಿ ಸೋಲು- ಗೆಲುವು ಸಹಜ. ಆದರೆ, ಸ್ಪರ್ಧೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವುದು ಮುಖ್ಯ. ಸೋತವರು ನಿರಾಶರಾಗದೇ ತಮ್ಮ ಸಾಧನೆ ಇನ್ನಷ್ಟು ಬಲಪಡಿಸಿಕೊಳ್ಳಬೇಕು. ಗೆದ್ದವರು ಅಹಂಭಾವದಿಂದ ಬೀಗದೇ ವಿನಯಶೀಲರಾಗಿರಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಮಾತನಾಡಿ, ಶಾಲೆಯಲ್ಲಿ ಉತ್ತಮ ಕಲಿಕಾ ಪರಿಸರವಿದೆ. ಶಿಕ್ಷಕರು ಪರಿಶ್ರಮದಿಂದ ಪ್ರತಿ ವರ್ಷ ಶಾಲಾ ದಾಖಲಾತಿ ಹೆಚ್ಚಳ ಆಗುತ್ತಿರುವುದು ಸಂತೋಷ. ಶಾಲಾ ಮಕ್ಕಳು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಛದ್ಮವೇಷ, ಕ್ಲೇ ಮಾಡೆಲಿಂಗ್, ಕಂಠಪಾಠ, ಆಶುಭಾಷಣ, ಚಿತ್ರಕಲೆ, ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿರುವುದು ಹೆಮ್ಮೆಯ ವಿಷಯ ಎಂದರು.ಶಿಕ್ಷಕಿ ಸಮೀರಾ ಖಾನಂ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿತ್ತಪ್ಪ, ಅಂಗನವಾಡಿ ಕಾರ್ಯಕರ್ತೆ ಅರ್ಚನಾ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿತ್ರಪ್ಪ ಸಣ್ಣೀರಪ್ಪ, ಗ್ರಾಮದ ಮುಖಂಡರಾದ ಸಣ್ಣಕಾಟಪ್ಪ, ಚಂದ್ರಪ್ಪ, ಗೋವಿಂದಪ್ಪ, ಕಾಟಪ್ಪ, ನಾಗೇಂದ್ರಪ್ಪ, ಕಾಟಲಿಂಗಪ್ಪ, ರಾಜಪ್ಪ ಮತ್ತಿತರರು ಇದ್ದರು.
- - - -20ಜೆಎಲ್.ಆರ್ ಚಿತ್ರ1:ಜಗಳೂರು ತಾಲೂಕಿನ ಅಣಬೂರು ಗ್ರಾಮದ ಗುರುಸಿದ್ದನಗೌಡ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಡಿ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.