ಸಾರಾಂಶ
ಯಲ್ಲಾಪುರ: ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸೃಜನಶೀಲತೆಯ ಅಭಿವ್ಯಕ್ತಿಗೊಳಿಸಲು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿಯಂತಹ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ತನ್ಮೂಲಕ ಪಾಲಕರು ಮತ್ತು ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ಒಂದಾಗಿ ಬೆರೆಯಲು ಅವಕಾಶ ನೀಡುವ ಇಂತಹ ಸಂಘಟನಾತ್ಮಕ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ ಎಂದು ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ತಿಳಿಸಿದರು.ಅ. ೩೦ರಂದು ತಾಲೂಕಿನ ಉಮ್ಮಚಗಿಯ ಮನಸ್ವಿನಿ ವಿದ್ಯಾಲಯದ ಆವಾರದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮಸ್ವಯಾಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ ಉಮ್ಮಚಗಿ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಮ್ಮಚಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಸಂಪನ್ಮೂಲಗಳ ಕ್ರೋಢೀಕರಣ ಅತ್ಯಂತ ಕಷ್ಟಕರವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಉಮ್ಮಚಗಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಉತ್ತಮ ರೀತಿಯ ಶಿಕ್ಷಣ ನೀಡುವ ಸದುದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮನಸ್ವಿನಿ ವಿದ್ಯಾಲಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮನಸ್ವಿನಿ ವಿದ್ಯಾಲಯದ ಅಧ್ಯಕ್ಷೆ ರೇಖಾ ಭಟ್ಟ ಕೋಟೇಮನೆ ಮಾತನಾಡಿ, ನಮ್ಮ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕಿಂತ ಶೀಘ್ರಗತಿಯಲ್ಲಿ ಮೇಲಕ್ಕೇರಿದೆ. ಅನೇಕ ದಾನಿಗಳ ಮತ್ತು ಸಹಕಾರ ಸಂಸ್ಥೆಗಳ ನೆರವಿನಿಂದ ಸಂಸ್ಥೆ ಬೆಳೆಯುತ್ತಿರುವುದು ಸ್ಮರಣೀಯವಾಗಿದೆ ಎಂದರು.ಉಮ್ಮಚಗಿ ಸೇ.ಸ. ಸಂಘದ ಮುಖ್ಯ ಕಾರ್ಯನಿರ್ವಾಹಕ ಆರ್.ಎಸ್. ಹೆಗಡೆ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಶಕ್ತಿಯನ್ನು ಮತ್ತಷ್ಟು ಪ್ರೇರೇಪಿಸಲು ಕಾರಣವಾಗುತ್ತದೆ ಎಂದರು. ಗ್ರಾಪಂ ಸದಸ್ಯ ಖೈತಾನ್ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವೆಂದು ಭಾವಿಸಬೇಕೇ ಹೊರತು, ಬಹುಮಾನ ಪಡೆಯುವುದನ್ನೇ ಮುಖ್ಯವೆಂದು ಭಾವಿಸಬಾರದು ಎಂದರು.
ಸಿಆರ್‌ಪಿ ಕೆ.ಆರ್. ನಾಯ್ಕ ಮಾತನಾಡಿದರು. ಕ್ಲಸ್ಟರಿನ ೧೧ ಶಾಲೆಗಳ ಇನ್ನೂರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿನ್ಮಯಿ ಭಟ್ಟ, ಅಂಜನಾ ಹೆಗಡೆ, ಸಿರಿ ಹೆಗಡೆ, ಶರಣ್ಯಾ ನಾಯ್ಕರ ಪ್ರಾರ್ಥನೆ ಮತ್ತು ಮಾನ್ವಿ ಪಿ. ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಿಆರ್‌ಪಿ ವಿಷ್ಣು ಭಟ್ಟ ಸ್ವಾಗತಿಸಿದರು. ಮನಸ್ವಿನಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಸವಿತಾ ಭಟ್ಟ ನಿರ್ವಹಿಸಿದರು. ಶಿಕ್ಷಕ ನಾಗಭೂಷಣ ಹೆಗಡೆ ಬಾಳೆಹದ್ದ ವಂದಿಸಿದರು.