ವಿದ್ಯಾರ್ಥಿಗಳಿಗೆ ತರಬೇತಿ ಅಕಾಡೆಮಿ ಸ್ಥಾಪನೆ ಗುರಿ ಇದೆ

| Published : Jan 13 2025, 12:46 AM IST

ವಿದ್ಯಾರ್ಥಿಗಳಿಗೆ ತರಬೇತಿ ಅಕಾಡೆಮಿ ಸ್ಥಾಪನೆ ಗುರಿ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರೆಲ್ಲಾ ಸೇರಿ ಸಂಘ ಸ್ಥಾಪಿಸಿಕೊಂಡು ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಕೆಲಸ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಮಕ್ಕಳು ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಲು ಸೂಕ್ತ ತರಬೇತಿ ಮುಖ್ಯವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ನಮ್ಮ ಕೆ.ಆರ್. ನಗರದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅಕಾಡೆಮಿ ತೆರೆದು ತರಬೇತಿ ಕೊಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಿ. ರವಿಶಂಕರ್ ಭರವಸೆ ನೀಡಿದರು.

ಪಟ್ಟಣದ ಶ್ರೀ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ 10ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು ಆದರೆ ಇದಕ್ಕೆ ಸಮಾಜದ ಗಣ್ಯರ ಸಹಕಾರ ಅಗತ್ಯ ಎಂದರು.

ಶಿಕ್ಷಕರೆಲ್ಲಾ ಸೇರಿ ಸಂಘ ಸ್ಥಾಪಿಸಿಕೊಂಡು ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಕೆಲಸ. ಇದನ್ನು ಮುಂದುವರೆಸುವ ಜತೆಗೆ ಮಕ್ಕಳು ಉನ್ನತ ಸ್ಥಾನಮಾನಗಳಿಗೆ ಹೋಗಬೇಕಾದರೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಅಗತ್ಯವಿದ್ದು ಅಂತಹ ಕೆಲಸಕ್ಕೂ ಹೆಚ್ಚಿನ ಗಮನ ಹರಿಸಿ ಎಂದು ಕೋರಿದರು.

ಯಾವುದೇ ಸಮಾಜದ ಅಭಿವೃದ್ಧಿಗೆ ರಾಜಕೀಯ ಶಕ್ತಿ ಬಹಳ ಮುಖ್ಯ. ನೀವೆಲ್ಲರೂ ಸೇರಿ ಇಂದು ನನಗೆ ಆ ಶಕ್ತಿ ತುಂಬಿ ಶಾಸಕನಾಗಿ ಮಾಡಿದ್ದು ನಾನು ನಿಮಗೆ ಚಿರ ಋಣಿ ಆಗಿರುತ್ತೇನೆ. ನೀವು ನೀಡಿರುವ ಜವಾಬ್ಧಾರಿಯನ್ನು ಅರಿತು ಸಮಾಜವನ್ನು ಕಟ್ಟಿ ಬೆಳಸುವ ಜತೆಗೆ ಅಭಿವೃದ್ಧಿ ಮಾಡುವ ಮೂಲಕ ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದರು.

ರಾಜಕೀಯ ಅಧಿಕಾರದಷ್ಟೆ ಸಮಾಜದ ಅಭಿವೃದ್ಧಿಗೆ ಅಧಿಕಾರಿಗಳ ಶಕ್ತಿಯು ಕೂಡ ಬಹಳ ಮುಖ್ಯ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯ ಜತೆಗೆ ತಮ್ಮ ಹುಟ್ಟೂರು ಅಭಿವೃದ್ಧಿ, ಇತರೆ ಕೆಲಸ ಕಾರ್ಯಗಳನ್ನು ಮಾಡುವುದಲ್ಲದೇ ಕುಟುಂಬ ಆರ್ಥಿಕವಾಗಿ ಸದೃಡವಾಗುತ್ತದೆ. ಆದ್ದರಿಂದ ಅಂತಹ ಅಧಿಕಾರಿಗಳನ್ನು ಹೆಚ್ಚಿನ ರೀತಿಯಲ್ಲಿ ತಯಾರಿಸುವಂತಹ ಕೆಲಸವಾಗಬೇಕು ಎಂದರು.

ಇತರರಿಗೆ ನೋವು, ತೊಂದರೆ ಆಗದಂತೆ ಕಾನೂನು ಚೌಕಟ್ಟಿನಲ್ಲಿ ಆಗುವಂತಹ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತವೆ. ಆದರೆ ನಮ್ಮ ಅಧಿಕಾರ ಇದೆ ಎಂದು ಸಮಾಜದಲ್ಲಿ ಅಶಾಂತಿ ಕದಡಿ ಅಗೌರವ ತರುವಂತಹ ಕೆಲಸ ಮಾಡುವವರಿಗೆ ನಾವು ಸಹಕಾರ ಕೊಡುವುದಿಲ್ಲಾ ಸಮಾಜದ ಮುಖಂಡರು ಗ್ರಾಮಗಳ ಯಜಮಾನರುಗಳು ಕುರಿತು ಅಂತವರಿಗೆ ಬುದ್ದಿ ಹೇಳಿ ತಿಳುವಳಿಕೆ ನೀಡಿ ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಾಗಿ ಗಣಿತ ಪಠ್ಯ ಮತ್ತು ಇಂಗ್ಷಿಷ್ ಭಾಷೆ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಆ ವಿಷಯಗಳ ಶಿಕ್ಷಕರ ಕೊರತೆ ಕಾರಣವಾಗಿದ್ದು, ಪ್ರತ್ಯೇಕ ತರಬೇತಿಯ ಅವಶ್ಯಕತೆ ಇದೆ. ಆದ್ದರಿಂದ ಅಗತ್ಯ ತರಬೇತಿ ಕೊಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಡಿಡಿಪಿಐ ಜವರೇಗೌಡ, ವೈದ್ಯ ಡಾ. ಲೋಹಿತ್, ಶ್ರೀ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ. ಚಿಕ್ಕೇಗೌಡ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಕೋಳಿ ಪ್ರಕಾಶ್, ಶಿವುನಾಯಕ್, ಗ್ರಾಪಂ ಅಧ್ಯಕ್ಷ ಮಂಜಪ್ಪ, ರಾಜೇಗೌಡ, ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಕಾಂಗ್ರೆಸ್ ಮುಖಂಡ ವೆಂಕಟೇಶ್, ಸಿಡಿಪಿಒ ಅಣ್ಣೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಬಿ. ಸ್ವಾಮಿ, ಖಜಾಂಚಿ ಡಿ. ಮಂಜು, ಗೌರವಾಧ್ಯಕ್ಷರಾದ ಎಂ. ನಾಗರಾಜು, ಟಿ. ಪುರಷೋತ್ತಮ್, ಪ್ರಧಾನ ಸಂಚಾಲಕ ಭಾಸ್ಕರ್, ಉಪಾಧ್ಯಕ್ಷ ರಾಮೇಗೌಡ, ರಾಜೇಗೌಡ, ಮಂಜುರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಜೆ. ಬೋಜೆಗೌಡ, ಸೇರಿದಂತೆ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಇದ್ದರು.