ಸಾರಾಂಶ
ಜೆ.ಎಸ್. ಪದವಿ ಪೂರ್ವ ಕಾಲೇಜಿನ 33 ವಿದ್ಯಾರ್ಥಿಗಳು ಹಾಗೂ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯ 2024ನೇ ಸಾಲಿನ ರಾಜ್ಯ ಮಟ್ಟದಲ್ಲಿ ಶ್ರೇಣಿ ಪಡೆದ ಮಲ್ಲತ್ತಹಳ್ಳಿಯ ಜೆ.ಎಸ್. ಪದವಿ ಪೂರ್ವ ಕಾಲೇಜಿನ 33 ವಿದ್ಯಾರ್ಥಿಗಳು ಹಾಗೂ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಕನ್ನಡಪ್ರಭ ಸಮನ್ವಯ ಮತ್ತು ವಿಶೇಷ ಯೋಜನೆ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಶಿಸ್ತುಬದ್ಧ ಜೀವನ ಕ್ರಮ, ಗುಣಮಟ್ಟದ ಶಿಕ್ಷಣ, ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟಾಗ ಮಾತ್ರ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದರು.
ಪೋಷಕರು ಮಕ್ಕಳ ಮೇಲೆ ಇಂತದ್ದೇ ವಿಷಯಗಳನ್ನು ಕಲಿಯಬೇಕೆಂದು ಒತ್ತಡ ಹೇರಬಾರದು. ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯ ಗುರುತಿಸಿ ಅದಕ್ಕೆ ಪೂರಕ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.ಶ್ರೀ ದುರ್ಗಾಪರಮೇಶ್ವರಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ನಿರ್ದೇಶಕ ಡಾ। ಎಸ್.ಜಯರಾಮ ಶೆಟ್ಟಿ, ಕಾಲೇಜಿನಲ್ಲಿ ಹಣ ಸಂಪಾದನೆ ಮಾಡುವ ಶಿಕ್ಷಣದ ಬದಲು ಪೋಷಕರು, ಗುರುಹಿರಿಯರನ್ನು ಗೌರವಿಸುವ ಸಂಸ್ಕೃತಿ, ಸಂಸ್ಕಾರ ಕಲಿಸುತ್ತೇವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿದ ಕೀರ್ತಿ ಕಾಲೇಜಿನ ಶಿಕ್ಷಕರಿಗೆ ಹಾಗೂ ಪ್ರಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಪತ್ರಿಕಾ ಪ್ರತಿನಿಧಿ ಎಂ.ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡಪ್ರಭ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಂಜುನಾಥ ದ್ಯಾವನಗೌಡ್ರ, ಶ್ರೀ ದುರ್ಗಾಪರಮೇಶ್ವರಿ ಎಜುಕೇಷನಲ್ ಟ್ರಸ್ಟ್ ಉಪಾಧ್ಯಕ್ಷೆ ಸುಲತಾ ಜೆ.ಶೆಟ್ಟಿ, ಕಾರ್ಯದರ್ಶಿ ನಿಧೀಶ್ ಜೆ.ಶೆಟ್ಟಿ, ಪ್ರಾಚಾರ್ಯರಾದ ಎನ್.ಕೆ.ವಿಜಯಲಕ್ಷ್ಮಿ, ಪ್ರತಿಭಾ ಕಳಸ್ ಇದ್ದರು.---
ಚಿತ್ರ: ಮಲ್ಲತ್ತಹಳ್ಳಿಯ ಜೆ.ಎಸ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.