ಪ್ರತಿಭೆ ಗುರುತಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆ

| Published : Nov 12 2024, 12:48 AM IST

ಸಾರಾಂಶ

ಸೊರಬ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸಲು ಇಲಾಖೆಯಿಂದ ಕ್ರಮ ವಹಿಸಲಾಗುತ್ತಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.

ಸೊರಬ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸಲು ಇಲಾಖೆಯಿಂದ ಕ್ರಮ ವಹಿಸಲಾಗುತ್ತಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.ತಾಲೂಕಿನ ಹೊಸಬಾಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ನಡೆದ ಹೊಸಬಾಳೆ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಹೆಚ್ಚು ಅನುದಾನವನ್ನು ನೀಡುವ ಮೂಲಕ ಶಾಲೆಗಳ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕ್ಷೇತ್ರದ ಶಾಸಕರಾದ ಎಸ್.ಮಧುಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ತರುವಾಯ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ. ಜೊತೆಗೆ, ಸರ್ಕಾರಿ ಶಾಲೆಗಳ ಉಳಿವಿಗೆ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಪೂರಕ ವಾತವರಣವನ್ನು ಸೃಷ್ಟಿಸಲಾಗುತ್ತಿದೆ. ಕಲಿಕೆಯ ಜೊತೆಗೆ ಕಲಾತ್ಮಕ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆಯಾಗಿದೆ. ಮಕ್ಕಳಲ್ಲಿನ ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸಬೇಕಾದ ಹೊಣೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ತಾವು ಓದುವ ಸಮಯದಲ್ಲಿ ಈ ರೀತಿಯ ಕಾರ್ಯಕ್ರಮಗಳು ಇರಲಿಲ್ಲ. ಆದ್ದರಿಂದ ಪ್ರತಿಭೆ ಅನಾವರಣಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತಿರಲಿಲ್ಲ. ಪ್ರಸ್ತುತ ಸರ್ಕಾರ ಮಕ್ಕಳ ಕೌಶಲ್ಯ ಗುರುತಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿವಿಧ ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡುತ್ತಿದೆ ಎಂದರು. ಇದೇ ವೇಳೆ ದಾನಿಗಳಾದ ಶಿವಪ್ಪನಾಯಕ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಎಸ್‌ಡಿಎಂಸಿ ಸದಸ್ಯರು, ಗ್ರಾಮ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಶಿವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶೋಭಾ ಯೋಗಿಶ್, ಉಪಾಧ್ಯಕ್ಷ ಭುಜೇಂದ್ರ, ಸದಸ್ಯ ಸತ್ಯನಾರಾಯಣ, ಹಾಪ್ ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷೆ ಮಂಗಳಾ ಚೌಡಪ್ಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರಭದ್ರಪ್ಪ, ಬಿಆರ್‌ಸಿ ದಯಾನಂದ ಕಲ್ಲೇರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಗಣಪತಿ, ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಬಿಆರ್‌ಪಿ ಮಂಜಪ್ಪ, ಬಿಆರ್‌ಪಿ ರಾಘವೇಂದ್ರ, ಮುಖ್ಯಶಿಕ್ಷಕ ಹೊಳಿಯಪ್ಪ, ಮುಟಗುಪ್ಪೆ ಶಾಲೆಯ ಮುಖ್ಯಶಿಕ್ಷಕ ಮಂಜಪ್ಪ ಸೇರಿದಂತೆ ಮತ್ತಿತರರಿದ್ದರು.

ಶಿಕ್ಷಕ ಕೃಷ್ಣಮೂರ್ತಿ ನಿರೂಪಿಸಿದರು.