ವಿದ್ಯಾರ್ಥಿಗಳ ಮೌಲ್ಯ ಅರಿಯಲು ಪ್ರತಿಭಾಕಾರಂಜಿ ಸೂಕ್ತ: ಸಿ. ನಿಂಗಪ್ಪ

| Published : Sep 23 2024, 01:19 AM IST

ವಿದ್ಯಾರ್ಥಿಗಳ ಮೌಲ್ಯ ಅರಿಯಲು ಪ್ರತಿಭಾಕಾರಂಜಿ ಸೂಕ್ತ: ಸಿ. ನಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಹಡಗಿರುವ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ.

ಕುರುಗೋಡು: ಮಕ್ಕಳಲ್ಲಿ ಹಡಗಿರುವ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ ಹೇಳಿದರು.

ಪಟ್ಟಣದ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಗೆಣಿಕೆಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಆಯೋಜನೆಯಿಂದ ಮಕ್ಕಳಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಪ್ರಗತಿ ಸಾದಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇದರಿಂದ ಮಕ್ಕಳಿಗೆ ಉತ್ತಮ ಜೀವನದ ಮೌಲ್ಯಗಳನ್ನು ಬೆಳೆಸಬಹುದು ಎಂದರು. ಸರ್ಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು. ಶಿಕ್ಷಕರು ಮಕ್ಕಳಲ್ಲಿ ಭೇದಭಾವ ತೋರದೇ ಪ್ರತಿಭಾವಂತ ಮಕ್ಕಳಿಗೆ ಮಾತ್ರ ಆಯ್ಕೆ ಮಾಡಿ ಎಂದರು.

ನಂತರ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ್ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಯಿಂದ ಮಕ್ಕಳಲ್ಲಿ ಜ್ಞಾನ ವಿಕಸನವಾಗುತ್ತದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಎಷ್ಟೋ ಜನ ಮಕ್ಕಳಿಗೆ ತಮ್ಮ ಪ್ರತಿಭೆಯ ಬಗ್ಗೆ ಅರಿವಿರುವುದಿಲ್ಲ,ಅವರ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಯ ಒಟ್ಟು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾನಪದ ನೃತ್ಯ, ಕೋಲಾಟ, ದೇಶಭಕ್ತಿ, ಅಭಿನಯ ಗೀತೆ, ರಸಪ್ರಶ್ನೆ, ಧಾರ್ಮಿಕ ಪಠಣ, ಕಂಠಪಾಠ ಪದ್ಯಗಳು ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡರು.

ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಗುರು ಸಿಸ್ಟರ್ ವೆರೋನಿಕಂ, ಪುರಸಭೆ ಅಧ್ಯಕ್ಷ ಶೇಖಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಂ ಗೊರವ, ಸಿಆರ್ಪಿ ಜಡೇಶ್, ಗೌರವ ಅಧ್ಯಕ್ಷ ಕೆ.ಸಣ್ಣಮಾರೆಪ್ಪ, ಚಿನ್ಕೋರ್ ನಾಯ್ಕ್, ಹರಿಕೃಪ ಕಾಲೋನಿ ಮುಖ್ಯ ಶಿಕ್ಷಕ ಬಸವರಾಜ್, ಡಿ.ಎಂ ಮಲ್ಲಿಕಾರ್ಜುನ, ಎಂ.ಸಂತೋಷ, ಶಿಕ್ಷಕ ಗವಿಸಿದ್ದಪ್ಪ, ಬಸವರಾಜ್ ಬಲ್ಲೂರು, ಪುರಸಭೆ ಸದಸ್ಯರಾದ ಮಾಂಚಾಲಮ್ಮ, ನಟರಾಜ್, ಅಂಜಿನಪ್ಪ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುರುಗೋಡು ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಗೆಣಿಕೆಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.