ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಬಿಸಿಲಿನ ತಾಪ ಕಡಿಮೆಯಾಗಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಪಟ್ಟಣದ ನಿವಾಸಿಗಳು ಎರಡು ಕತ್ತೆಗಳಿಗೆ ಮದುವೆ ಮಾಡಿ ಜೇಡಿ ಮಣ್ಣಿನಿಂದ ತಯಾರಿಸಿದ್ದ ಮಳೆರಾಯನ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಮೆರವಣಿಗೆ ಮಾಡಿದರು.ಪಟ್ಟಣದ ಶಕ್ತಿದೇವತೆ ಶ್ರೀಬಡಗೂಡಮ್ಮದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಪಟ್ಟಣದ ನಿವಾಸಿಗಳು, ತೀವ್ರ ಬರಗಾಲಕ್ಕೆ ಸಿಲುಕಿರುವ ತಾಲೂಕು ಮತ್ತು ನಾಡಿಗೆ ಉತ್ತಮ ಮಳೆಯಾಗಬೇಕು. ಕೆರೆ ಕಟ್ಟೆಗಳು ಭರ್ತಿಯಾಗಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು, ರೈತರ ಬದುಕು ಹಸನಾಗಲೆಂದು ಪ್ರಾರ್ಥಿಸಿದರು.
ಬಳಿಕ ಪಟ್ಟಣದ ಗೋಪಾಲಚಾರ್ ಅವರು ಜೇಡಿ ಮಣ್ಣಿನಿಂದ ಮಾಡಿಕೊಟ್ಟಿದ್ದ ಮಳೆರಾಯನ ಮೂರ್ತಿ ಎದುರು ಗಂಡು ಹೆಣ್ಣು ಕತ್ತೆಗಳನ್ನು ನವ ವಧುವರರಂತೆ ಸಿಂಗರಿಸಿ ಮದುವೆ ಮಾಡಿಸಿ ಮಂಗಳವಾದ್ಯದೊಂದಿಗೆ ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.ಮಣ್ಣಿನ ಮಳೆರಾಯನ ಮೂರ್ತಿಯನ್ನು ಹೊತ್ತಿದ್ದ ಪ್ರಾಚೀನವಸ್ತು ಸಂಗ್ರಹಕಾರ ರಾಮಕೃಷ್ಣ ಅವರಿಗೆ ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳ ಮಾಲೀಕರು ನೀರಿನ ಅಭಿಷೇಕ ಮಾಡಿ ಮಳೆಗಾಗಿ ಕೈ ಮುಗಿದು ಪ್ರಾರ್ಥಿಸಿದರೆ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಮತ್ತು ಮಕ್ಕಳು ಉಯ್ಯೋ... ಉಯ್ಯೋ... ಮಳೆರಾಯ... ಎಂಬ ಘೋಷಣೆಯೊಂದಿಗೆ ಎಲ್ಲರ ಗಮನ ಸೆಳೆದರು.
ಬಳಿಕ ಪಡುವಲಪಟ್ಟಣ ರಸ್ತೆಯ ಶ್ರೀಎಲ್ಲಮ್ಮದೇವಿ ಹಾಗೂ ಶ್ರೀಮಾರಮ್ಮದೇವಿ ದೇವಸ್ಥಾನಗಳಲ್ಲಿ ವಿಶೇಷಪೂಜೆ ಸಲ್ಲಿಸಿದ ನಂತರ ಇತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳದಲ್ಲಿ ಮಳೆರಾಯನ ಮೂರ್ತಿಯನ್ನು ವಿಸರ್ಜಿಸಲಾಯಿತು.ನಾಳೆ ಶ್ರೀಜಗದ್ಗುರು ಬಸವೇಶ್ವರ ಜಯಂತಿ: ಟಿ.ನಾಗರಾಜು
ಶ್ರೀರಂಗಪಟ್ಟಣ:ಪಟ್ಟಣದ ಜಗಜ್ಯೋತಿ ಬಸವೇಶ್ವರ ಸಂಘ, ಅಖಿಲ ಭಾರತ ವೀರಶೈವ ಲಿಂಗಯತ ಮಹಸಭಾ ಹಾಗೂ ವೀರಶೈವ ಲಿಂಗಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಮೇ 19ರಂದು ಪಟ್ಟಣದಲ್ಲಿ ಶ್ರೀಜಗದ್ಗುರು ಬಸವೇಶ್ವರ ಜಯಂತಿಯನ್ನು ಹಮ್ಮಿಕೊಳ್ಳಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಟಿ.ನಾಗರಾಜು ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಪದಾಧಿಕಾರಿಗಳೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕುದೇರು ಮಠದ ಶ್ರೀಗುರುಶಾಂತ ಮಹಾ ಸ್ವಾಮೀಗಳು, ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಾಗೂ ಬಿದರಳ್ಳಿಹುಂಡಿಯ ಶ್ರೀಗುರು ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.ಉತ್ಸವದಲ್ಲಿ ಪಿಲ್ಲಹಳ್ಳಿ ಬಸವೇಶ್ವರ ಬಳಗದ ಗ್ರಾಮಸ್ಥರಿಂದ ನಂದಿಧ್ವಜ ಹಾಗೂ ಎನ್.ವಿಷಕಂಠು ಇವರಿಂದ ವೀರಗಾಸೆ ಕುಣಿತ ಸೇರಿದಂತೆ ಮಂಗಳ ವಾದ್ಯದೊಂದಿಗೆ ಬಸವೇಶ್ವರ ಪ್ರತಿಮೆಯ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಪ್ರದೀಪ್ ಕುಮಾರ್, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ವಿ.ಎಂ. ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಮಲ್ಲುಸ್ವಾಮಿ, ನಂದೀಶ್ ಇತರರು ಇದ್ದರು.