ಸಾರಾಂಶ
ಯಲ್ಲಾಪುರ: ಗುರುವಿನ ಅನುಗ್ರಹ ಎಲ್ಲ ಕಾಲಕ್ಕೂ ಎಲ್ಲ ಕಾರ್ಯಗಳಲ್ಲಿಯೂ ಅಪೇಕ್ಷಿತವಾದದ್ದು. ನಿರ್ಮಲವಾದ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಎಂದಿಗೂ ಫಲ ನೀಡುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಾಲೂಕಿನ ಉಮ್ಮಚಗಿಯ ಗುರುಮೂರ್ತಿ ಬಡಾವಣೆಯ ಗುರುಮೂರ್ತಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಜ. ೩೦ರಂದು ಗುರುಮೂರ್ತಿ ಮಂದಿರದ ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ, ಆಶೀರ್ವಚನ ನೀಡಿದರು.ನಿಷ್ಕಲ್ಮಶ ಪ್ರಾರ್ಥನೆಗೆ ಮಾತ್ರ ಗುರು ಒಲಿದು, ಜೀವನದ ಶ್ರೇಯಸ್ಕರ ಮಾರ್ಗವನ್ನು ತೋರುತ್ತಾನೆ. ಈ ಹಿನ್ನೆಲೆ ಇಲ್ಲಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳು ಲೋಕಹಿತ ಸಾಧನೆಗಾಗಿ ಮುಡಿಪಾಗಿಟ್ಟಿವೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು. ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ದಾಪುರದ ಶಿರಳಗಿಯ ಬ್ರಹ್ಮಾನಂದಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗುರುತತ್ವವೆಂದರೆ ಪರಮಾತ್ಮನ ಆಶೀರ್ವಚನವೇ ಆಗಿದೆ. ಇದನ್ನು ಸಾಧಿಸಲು ಏಕಾಗ್ರತೆ ಮತ್ತು ಚಿತ್ತಶುದ್ಧಿಗಳು ಅತ್ಯಗತ್ಯವಾಗಿದ್ದು, ಪ್ರಾಚೀನರು ಉಪಾಸನೆಗಳ ವಿವಿಧ ರೂಪಗಳಲ್ಲೊಂದಾದ ಲಿಂಗವನ್ನು ಚಿಹ್ನೆಯಾಗಿ ನೀಡಿದರು.
ಕೊನೆ, ಮೊದಲುಗಳಿಲ್ಲದ ಬೆಳಕಿನ ಪುಂಜವೇ ದೇವರಾಗಿದ್ದು, ಶಿವನೆಂದರೆ ಜಗತ್ತಿನ ಅಣುರೇಣು ತೃಣಕಾಷ್ಠಗಳಲ್ಲಿ ಅಡಗಿದ ದಿವ್ಯ ಸ್ವರೂಪವಾಗಿದೆ. ಹಿರಿಯರು ಆಕಾಶವನ್ನೇ ದೈವದ ಗುರುತಿನ ಸಂಕೇತವೆಂದು ಪರಿಗಣಿಸಿದ್ದಾರೆ. ದೇವರನ್ನು ಗುರುತಿಸುವ ಪ್ರತ್ಯಕ್ಷ ವ್ಯಕ್ತಿ ಗುರುವೇ ಆಗಿದ್ದಾನೆ ಎಂದರು.೩ ದಿನಗಳ ಕಾಲ ನಡೆದ ಮಹಾರುದ್ರಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ೫೦ಕ್ಕಿಂತ ಹೆಚ್ಚು ಸಂಖ್ಯೆಯ ವೈದಿಕರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದ ಕಾರ್ಯಕ್ರಮ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳಾದ ಶ್ರೀವರ ಮತ್ತು ಲೋಹಿತರ ವೇದಘೋಷದೊಂದಿಗೆ ಆರಂಭಗೊಂಡಿತು. ಸಂಜನಾ ಭಟ್ಟ ಪ್ರಾರ್ಥಿಸಿದರು. ಪಾಠಶಾಲೆಯ ಅಧ್ಯಾಪಕ ವಿ. ಮಹೇಶ ಭಟ್ಟ ಇಡಗುಂದಿ ನಿರ್ವಹಿಸಿದರು. ಶ್ರೀಪಾದ ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕುಂಬ್ರಿಗುಡ್ಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಜ್ಯೋತಿಷ್ಯಾಚಾರ್ಯ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ, ಅಗ್ನಿಹೋತ್ರಿ ನರಸಿಂಹ ಭಟ್ಟ ನಡುಗೋಡು, ಶ್ರೀಮಠದ ಉಪಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಕಲು, ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು. ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ಸುದರ್ಶನ ಮಾತೃಮಂಡಳಿಯ ಮಾತೆಯರು ನಂತರ ಭಗವದ್ಗೀತೆಯನ್ನು ಪಠಿಸಿದರು.