ಪೂರ್ವ ಮುಂಗಾರು ಭೂಸ್ಪರ್ಶ, ಅನ್ನದಾತ ಹರ್ಷ

| Published : May 30 2024, 12:47 AM IST

ಸಾರಾಂಶ

ರಾಮದುರ್ಗ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ಆರಂಭ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತಮ ಮುಂಗಾರು ನಿರೀಕ್ಷೆಯೊಂದಿಗೆ ಅನ್ನದಾತ ತನ್ನ ಕೃಷಿ ಚಟುವಟಿಕೆಗಳೊಂದಿಗೆ ಭೂಮಿ ಹದಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿ ಬಿತ್ತನೆಗೆ ಸಕಲ ಸಿದ್ಧತೆಯಲ್ಲಿ ತಲ್ಲೀನನಾಗಿದ್ದಾನೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ಆರಂಭ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತಮ ಮುಂಗಾರು ನಿರೀಕ್ಷೆಯೊಂದಿಗೆ ಅನ್ನದಾತ ತನ್ನ ಕೃಷಿ ಚಟುವಟಿಕೆಗಳೊಂದಿಗೆ ಭೂಮಿ ಹದಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿ ಬಿತ್ತನೆಗೆ ಸಕಲ ಸಿದ್ಧತೆಯಲ್ಲಿ ತಲ್ಲೀನನಾಗಿದ್ದಾನೆ.

ಕೊನೆಯ ಕ್ಷಣದಲ್ಲಿ ಕೃತಿಕಾ ಮಳೆ ಉತ್ತಮವಾಗಿದ್ದು, ಶುಕ್ರವಾರದಿಂದ ಕೂಡಿರುವ ರೋಹಿಣಿ ಮಳೆ ಕೂಡ ಚೆನ್ನಾಗಿ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ರೈತರು. ಕಳೆದ ಸಾಲಿನ ಮುಂಗಾರು ಹಾಗೂ ಹಿಂಗಾರು ಮಳೆಯಾಗದೇ ಭೀಕರ ಬರದ ಛಾಯೆಯಿಂದ ಹೊರ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಮಳೆ ಉತ್ತಮ ಮುಂಗಾರಿನ ಭರವಸೆ ಮೂಡಿಸಿದೆ. ಇದರಿಂದ ಮುಂಗಾರು ಹಂಗಾಮಿಗೆ ಬೇಕಾಗುವ ಬೀಜ ಮತ್ತು ಗೊಬ್ಬರ ಅಗತ್ಯ ಸಂಗ್ರಹವಾಗಿದೆ. ಅಂದಾಜು 52 ಸಾವಿರ ಹೆಕ್ಟೇರ್ ಪ್ರದೇಶ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.11 ಬೀಜ ವಿತರಣಾ ಕೇಂದ್ರಗಳು ಆರಂಭ:

ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಹೆಸರು ಬಿತ್ತನೆ ಪ್ರಾರಂಭವಾಗಿದೆ. 316.20 ಕ್ವಿಂಟಲ್ ಬೀಜದ ದಾಸ್ತಾನಿದ್ದು. ಸಜ್ಜೆ, ಗೋವಿನಜೋಳ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಬೀಜಗಳ ವಿತರಣೆಗಾಗಿ ಹೋಬಳಿ ಕೇಂದ್ರ ಕಟಕೋಳ, ಕೆ.ಚಂದರಗಿ, ಮುದಕವಿ ಮತ್ತು ಸುರೇಬಾನ ಅಲ್ಲದೇ ರೈತರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 7 ಬೀಜ ವಿತರಣಾ ಕೇಂದ್ರಗಳನ್ನು ಬಟಕುರ್ಕಿ, ಸಾಲಹಳ್ಳಿ, ಸುನ್ನಾಳ, ಮುದೇನೂರ, ಹುಲಕುಂದ, ಹೊಸಕೋಟಿ, ದಾ.ಸಾಲಾಪೂರಗಳಲ್ಲಿ ತೆರೆಯಲಾಗಿದ್ದು, ಕೇಂದ್ರಗಳಲ್ಲಿ ಪ್ರಮಾಣಿಕರಿಸಿದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.ವಾಡಿಕೆಗಿಂತ ಹೆಚ್ಚು ಮಳೆ, ಅಗತ್ಯ ರಸಗೊಬ್ಬರ ಸಂಗ್ರಹ

ತಾಲೂಕಿನಲ್ಲಿ ಮೇ. 25ರವರೆಗೆ ವಾಡಿಕೆಯಂತೆ 69 ಮಿಮೀ ಮಳೆಯಾಗಬೇಕಾಗಿತ್ತು. ಆದರೆ, 77.90 ಮಿಮೀ ಮಳೆಯಾಗಿದೆ. ತಾಲೂಕಿನ 60 ಖಾಸಗಿ ವ್ಯಾಪಾರಸ್ಥರು ಮತ್ತು 15 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 317.9 ಮೆಟ್ರಿಕ್ ಟನ್ ಡಿಎಪಿ, 136.97 ಮೆಟ್ರಿಕ್ ಟನ್ ಎಂಒಪಿ, 893 ಮೆಟ್ರಿಕ್ ಟನ್ ಎನ್‌ಪಿಕೆ ಮತ್ತು 1799.11 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಸಂಗ್ರಹವಿದೆ. ಹೆಸರು ಬಿತ್ತನೆ ಮಾಡುವ ರೈತರು ಹೆಸರು ಬೆಳೆಗೆ ಕೊಂಡಿಹುಳ ಬೀಳುವ ಸಂಭವವಿದ್ದು, ಈ ಕುರಿತು ಜಾಗೃತಿ ವಹಿಸಿ ನಿಗಾವಹಿಸಬೇಕು. ಒಂದು ವೇಳೆ ಕೊಂಡಿಹುಳು ಕಂಡು ಬಂದರೇ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ರೈತರಿಗೆ ಇಲಾಖೆಯಿಂದ ಸಲಹೆ ನೀಡಿದ್ದಾರೆ.ಬೀಜ ಮತ್ತು ರಸಗೊಬ್ಬರವನ್ನು ಪಾಕೆಟ್ ಮೇಲಿರುವ ಎಂಆರ್‌ಪಿ ಬೆಲೆಗೆ ಮಾರಾಟ ಮಾಡಬೇಕು. ರಶೀದಿ ನೀಡಬೇಕು. ಅಂಗಡಿಗಳಲ್ಲಿ ಇರುವ ಬೀಜ ಮತ್ತು ರಸಗೊಬ್ಬರದ ಸಂಗ್ರಹ ಹಾಗೂ ಬೆಲೆ ಗ್ರಾಹಕರ ಕಣ್ಣಿಗೆ ಕಾಣುವಂತೆ ಸ್ಪಷ್ಟವಾಗಿ ಬರೆದು ನಾಮ ಫಲಕ ಹಾಕುವುದು ಕಡ್ಡಾಯ. ಅಲ್ಲದೇ ನಾಮಫಲಕದ ಮಾಹಿತಿ ಪ್ರಕಾರ ದಾಖಲಾತಿ ಸಹಿತ ಇಡಲು ಮಾರಾಟಗಾರರಿಗೆ ಈಗಾಗಲೇ ಸೂಚಿಸಲಾಗಿದೆ.

-ಎಸ್.ಎಫ್.ಬೆಳವಟಗಿ, ಸಹಾಯಕ ಕೃಷಿ ನಿರ್ದೇಶಕರು ರಾಮದುರ್ಗ.

ಕಳೆದ ವರ್ಷದಲ್ಲಿ ಹಿಂಗಾರು ಮತ್ತು ಮುಂಗಾರು ಮಳೆಯ ವಿಫಲತೆಯಿಂದ ಕಂಗೆಟ್ಟಿದ್ದ ರೈತನಿಗೆ ಈ ಭಾರಿ ಮುಂಗಾರು ಮಳೆ ಆಶಾದಾಯಕವಾಗಿದೆ. ಕೃಷಿ ಇಲಾಖೆ ಕೂಡ ಅಗತ್ಯ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆ ಮಾಡಿ ರೈತರ ನೆರವಿಗೆ ಬರಬೇಕಾಗಿದೆ.

-ಈರನಗೌಡ ಪಾಟೀಲ, ರೈತ ಮುಖಂಡ ಕಟಕೋಳ.