ಮಾ.12 ರಿಂದ ರಾಜ್ಯದಲ್ಲಿ ಗುಡುಗು ಸಹಿತ ಮುಂಗಾರು ಪೂರ್ವ ಮಳೆ ಶುರು : ಎಲ್ಲೆಲ್ಲಿ..?

| N/A | Published : Mar 09 2025, 01:50 AM IST / Updated: Mar 09 2025, 08:07 AM IST

Rain Kerala
ಮಾ.12 ರಿಂದ ರಾಜ್ಯದಲ್ಲಿ ಗುಡುಗು ಸಹಿತ ಮುಂಗಾರು ಪೂರ್ವ ಮಳೆ ಶುರು : ಎಲ್ಲೆಲ್ಲಿ..?
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲ ತಾಪಕ್ಕೆ, ಮಳೆ ಮಾರುತಗಳು ಚುರುಕುಗೊಂಡಿರುವ ಕಾರಣ ಮಾ.12ರಿಂದ ರಾಜ್ಯದ ವಿವಿಧ ಭಾಗದಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಬೆಂಗಳೂರು : ಬಿಸಿಲ ತಾಪಕ್ಕೆ, ಮಳೆ ಮಾರುತಗಳು ಚುರುಕುಗೊಂಡಿರುವ ಕಾರಣ ಮಾ.12ರಿಂದ ರಾಜ್ಯದ ವಿವಿಧ ಭಾಗದಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಕ್ಯಾಲೆಂಡರ್‌ ಪ್ರಕಾರ ಮಾರ್ಚ್‌ ನಿಂದ ಮೇ ವರೆಗೆ ಮುಂಗಾರು ಪೂರ್ವ ಅವಧಿಯಾಗಿದೆ. ಈ ಅವಧಿಯಲ್ಲಿ ಬಿಸಿಲ ತಾಪಕ್ಕೆ ಮಳೆಯಾಗಲಿದೆ. ಅದೇ ರೀತಿಯ ವಾತಾವರಣ ಸೃಷ್ಟಿಯಾಗಿರುವುದರಿಂದ ಮಾ.12 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾ.12 ರಿಂದ 14 ರವರೆಗೆ ಮೂರು ದಿನ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಾ.12ರಿಂದ ಮಾ.14ರವರೆಗೆ ಗುಡುಗು ಸಹಿತ ಹಗುರ ಮಳೆಯಾಗುವ ಲಕ್ಷಣ ಕಂಡು ಬಂದಿದೆ. ಮೊದಲ ಎರಡು ದಿನ ಹೆಚ್ಚಿನ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಕೆಲ ದಿನಗಳಿಂದ ಬಿಸಿಲ ತಾಪ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ. ಬಿಸಿಲ ಪ್ರಮಾಣ ವಾಡಿಕೆಗಿಂತ 2 ರಿಂದ 4 ಡಿ.ಸೆ. ವರೆಗೆ ಹೆಚ್ಚಾದರೆ ಮಳೆ ಬರುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆ ಮುಂದಿನ ಮೂರು ತಿಂಗಳ ಗರಿಷ್ಠ ಉಷ್ಣಾಂಶ ಮತ್ತು ಮಳೆ ಕುರಿತು ಮುನ್ಸೂಚನೆ ಬಿಡುಗಡೆ ಮಾಡಿದೆ. ಈ ಪ್ರಕಾರ ಮಾರ್ಚ್‌ನಲ್ಲಿ ವಾಡಿಕೆ ಪ್ರಮಾಣದಷ್ಟು ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಮಾಣದಷ್ಟು ಮತ್ತು ಅದಕ್ಕಿಂತ ಹೆಚ್ಚಿನ ಬಿಸಿಲು ಇರಲಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದ್ದು, ಈ ಜಿಲ್ಲೆಗಳಲ್ಲಿ ಮಾರ್ಚ್‌ನಿಂದ ಮೇ ಅವಧಿಯ ಮೂರು ತಿಂಗಳಲ್ಲಿ 12 ರಿಂದ 15 ದಿನ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.