ಪ್ರಸ್ತುತ ಪೂರ್ವ ಮುಂಗಾರಿನಲ್ಲಿ ಮಳೆ ಗಾಳಿಯಿಂದ ಜಿಲ್ಲೆಯಲ್ಲಿ 1,181 ಹೆಕ್ಟೇರ್ ಕೃಷಿ ಬೆಳೆ ಹಾಗೂ 194.77 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟು 1,375.77 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಹಾವೇರಿ: ಪ್ರಸ್ತುತ ಪೂರ್ವ ಮುಂಗಾರಿನಲ್ಲಿ ಮಳೆ ಗಾಳಿಯಿಂದ ಜಿಲ್ಲೆಯಲ್ಲಿ 1,181 ಹೆಕ್ಟೇರ್ ಕೃಷಿ ಬೆಳೆ ಹಾಗೂ 194.77 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟು 1,375.77 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಳೆದ ಮೇ 1ರಿಂದ ಇಲ್ಲಿಯವರೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಸೇರಿದಂತೆ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ 9.34 ಹೆಕ್ಟೇರ್, ಹಾವೇರಿ 2 ಹೆಕ್ಟೇರ್, ರಾಣಿಬೆನ್ನೂರ 1,056 ಹೆಕ್ಟೇರ್, ಬ್ಯಾಡಗಿ 6.65 ಹೆ., ಹಿರೇಕೆರೂರ 9.3 ಹೆ., ರಟ್ಟಿಹಳ್ಳಿ 277.47 ಹೆ., ಶಿಗ್ಗಾಂವಿ 1.21 ಹೆ., ಸವಣೂರು 13.6 ಹೆ., ಸೇರಿದಂತೆ ಒಟ್ಟು 1,375.77 ಹೆಕ್ಟೇರ್ ಹಾನಿ ಸಂಭವಿಸಿದೆ. ಪ್ರಮುಖವಾಗಿ ಭತ್ತ 1,181 ಹೆ., ಬಾಳೆ 55.25 ಹೆ., ವೀಳ್ಯದೆಲೆ 36.20ಹೆ., ಅಡಕೆ 30.82 ಹೆ., ಪಪ್ಪಾಯ 6.3 ಹೆ., ಟೊಮೆಟೋ 6.10 ಹೆ., ಎಲೆಕೋಸು 6 ಹೆ., ತೆಂಗು 4.5 ಹೆ., ಮೆಣಸಿನಕಾಯಿ 3.2 ಹೆ., ಬಿನ್ಸ್ 1.2 ಹೆ., ಹಾಗಲಕಾಯಿ, ಹಿರೇಕಾಯಿ ತಲಾ 0.6 ಹೆ. ಹಾಗೂ ಇತರೆ 5.0ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮೂಲಸೌಕರ್ಯ ಹಾನಿ: ಪ್ರಸ್ತುತ ಪೂರ್ವ ಮುಂಗಾರಿನಲ್ಲಿ ಮಳೆ ಗಾಳಿಯಿಂದಾಗಿ ಜಿಲ್ಲೆಯಲ್ಲಿ ನಾಲ್ಕು ಶಾಲೆ, 1,652 ವಿದ್ಯುತ್ ಕಂಬಗಳು, 4 ವಿದ್ಯುತ್ ಟ್ರಾನ್ಸಫಾರ್ಮರ್, ವಿದ್ಯುತ್ ತಂತಿ, ವಿದ್ಯುತ್ ಹೈಟೆನ್ಷನ್ ಟವರ್ 8 ಹೀಗೆ 1,177 ಲಕ್ಷ ರು.ಗಳಷ್ಟು ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.167 ಮನೆಗಳಿಗೆ ಹಾನಿ: 2026-27ನೇ ಸಾಲಿನ ಪೂರ್ವ ಮುಂಗಾರಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 167 ಮನೆಗಳು ಹಾನಿಯಾದ ಬಗ್ಗೆ ವರದಿಯಾಗಿದ್ದು, ಈ ಪೈಕಿ 39 ಮನೆಗಳು ಮಾತ್ರ ಅಂಗೀಕೃತವಾಗಿವೆ. 97 ಮನೆಗಳು ತಿರಸ್ಕೃತವಾಗಿದ್ದು, 31 ಮನೆಗಳು ಪರಿಶೀಲನೆ ಹಂತದಲ್ಲಿವೆ ಎಂದು ಮಾಹಿತಿ ತಿಳಿಸಿದೆ. ವಾರದಲ್ಲಿ ಉತ್ತಮ ಮಳೆ: ಮೇ 21ರಿಂದ ಮೇ 28ರ ವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 20.30 ಮಿಮೀ ವಾಡಿಕೆ ಮಳೆಗೆ, 31.76 ಮಿ.ಮೀ ಮಳೆಯಾಗಿದೆ. ಹಾನಗಲ್ಲನಲ್ಲಿ 18.00 ಮಿ.ಮೀ. ಮಳೆಗೆ 27.76 ಮಿ.ಮೀ. ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ 19.80 ಮಿಮೀ ವಾಡಿಕೆ ಮಳೆಗೆ 26.80 ಮಿಮೀ ಮಳೆಯಾಗಿದೆ.