ಸಾರಾಂಶ
- ಹೊನ್ನಾಳಿ ತಾಲೂಕಿನಲ್ಲಿ 80.9 ಮಿಮೀ, ನ್ಯಾಮತಿ ತಾಲೂಕಿನಲ್ಲಿ 47.9 ಮಿಮೀ ಮಳೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗುಡುಗು ಮಿಂಚು ಆಲಿಕಲ್ಲು ಸಹಿತ ಪೂರ್ವ ಮುಂಗಾರು ಮಳೆಯಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 80.9 ಮಿ.ಮೀ. ಮತ್ತು ನ್ಯಾಮತಿ ತಾಲೂಕಿನಲ್ಲಿ 47.9 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ವಿಶ್ವನಾಥ್ ತಿಳಿಸಿದ್ದಾರೆ.ಮುಂಗಾರು ಹಂಗಾಮಿನ ಕೃಷಿ ಬೆಳೆಗೆ ನಿಗದಿತ ಸಮಯಕ್ಕೆ ಸರಿಯಾಗಿ ವಾಡಿಕೆಯ ಮಳೆಗಿಂತ ಹೆಚ್ಚಿನ ಮಳೆ ಬರುವ ಬಗ್ಗೆ ಹವಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ತಾಲೂಕಿನ 50850 ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ತಾಲೂಕಿನ ಕೆಲವು ಭಾಗಗಳಲ್ಲಿ ರೈತರು ಜಮೀನಿನಲ್ಲಿ ಬಿತ್ತನೆ ದೃಷ್ಟಿಯಿಂದ ಭೂಮಿ ಹದಗೊಳಿಸುವ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ತಾಲೂಕಿನ ಹೆಚ್ಚಿನ ಭಾಗದ ರೈತರು ಅಂದಾಜು 20 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.
ರೈತರು ಬಿತ್ತನೆ ಮಾಡಲು ಬಯಸುವಂತಹ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಸೋಯಾಬಿನ್, ಹೆಸರು, ತೊಗರಿ ಈ ಬೀಜಗಳ ಸಂಗ್ರಹವು ತಾಲೂಕಿನ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದೆ. ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದಿದ್ದಾರೆ.2025-26ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನಾದ್ಯಂತ ಪ್ರಚಾರ ಮತ್ತು ಮಾಹಿತಿ ನೀಡಲಾಗುತ್ತಿದೆ. ಈ ತಾಲೂಕಿನ ವ್ಯಾಪ್ತಿಯ ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದ್ದಾರೆ.
ಮಳೆಯ ಅನಿಶ್ಚಿತತೆ ಮತ್ತು ಅನಿಯಮಿತ ಮಳೆ ಕಾರಣಗಳಿಂದ ಬೆಳೆ ಉತ್ಪಾದಕತೆ ಮತ್ತು ಕೃಷಿ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ಮನಗೊಂಡ ರಾಜ್ಯ ಸರ್ಕಾರವು ಮಳೆಯಾಶ್ರಿತ ರೈತ ಸಮುದಾಯದ ಜೀವೊನಪಾಯ ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಯೋಜನಾ ಮಾರ್ಗಸೂಚಿ ಅನ್ವಯ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿ ಯೋಜನೆಯನ್ನು ನಿಯಮಾನುಸಾರ ಜಾರಿಗೆ ತರಲಾಗುವುದು ಎಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ, ಅರ್ಜಿ ಸಲ್ಲಿಸಬಹುದು. ಈ ಹಿಂದೆ ಕೃಷಿ ಹೊಂಡ ನಿರ್ಮಾಣ ಮಾಡಿಸದ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ವಿಶ್ವನಾಥ್ ತಿಳಿಸಿದ್ದಾರೆ.
- - -(ಬಾಕ್ಸ್) * ಸೌಲಭ್ಯಗಳು/ ಘಟಕಗಳ ವಿವರ ಕೃಷಿ ಭಾಗ್ಯ ಯೋಜನೆಯು ಪ್ಯಾಕೆಜ್ ಮಾದರಿಯಲ್ಲಿರುತ್ತದೆ. ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸೆಟ್, ಲಘು ನೀರಾವರಿ ಘಟಕ ಹಾಗೂ ತಂತಿಬೇಲಿಗಳನ್ನು ಒದಗಿಸುವ ಸೌಲಭ್ಯವಿರುತ್ತದೆ. ಈ ಎಲ್ಲ ಘಟಕಗಳನ್ನು ರೈತರು ಅನುಷ್ಠಾನಗೊಳಿಸುವುದು ಕಡ್ಡಾಯ. ಆದ್ದರಿಂದ ಕೃಷಿ ಹೊಂಡದ ಜೊತಗೆ ಎಲ್ಲ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡುವ ರೈತರನ್ನು ಯೋಜನಾ ಮಾರ್ಗಸೂಚಿ ಅನ್ವಯ ಆಯ್ಕೆಮಾಡಿ ಸಹಾಯಧನ ನೀಡಲಾಗುವುದು. ಆದ್ದರಿಂದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆಸಕ್ತಿವುಳ್ಳ ರೈತರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿಗಳನ್ನು ಸಲ್ಲಿಸಬೇಕು.
- - --6ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಮುಂಗಾರು ಪೂರ್ವ ಮಳೆಯಾದ ಹಿನ್ನೆಲೆ ರೈತ ಕುಟುಂಬ ಜಮೀನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು.