ಡೆಂಘೀ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ

| Published : Jul 14 2024, 01:38 AM IST

ಸಾರಾಂಶ

ಸೊಳ್ಳೆಗಳಿಂದ ಹರಡುವ ಡೆಂಘೀ, ಆನೆಕಾಲು ರೋಗ, ಮೆದುಳು ಜ್ವರ, ಮಲೇರಿಯಾದಂತಹ ಕಾಯಿಲೆಗಳನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ತುಂಬಾ ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸೊಳ್ಳೆಗಳಿಂದ ಹರಡುವ ಡೆಂಘೀ, ಆನೆಕಾಲು ರೋಗ, ಮೆದುಳು ಜ್ವರ, ಮಲೇರಿಯಾದಂತಹ ಕಾಯಿಲೆಗಳನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ತುಂಬಾ ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ್ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಹಾಗೂ ವೆಂಕಟೇಶ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೀ ವಿರೋಧಿ ಜಾಗೃತಿ ಜಾಥಾ ಹಾಗೂ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಮಹಾಮಾರಿ ಡೆಂಘೀ ವ್ಯಾಪಕವಾಗಿ ಹರಡುತ್ತಿದೆ. ಸಾರ್ವಜನಿಕರಿಗೆ ರೋಗದ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಾಗಿದೆ ಎಂದರು.

ಜಿಲ್ಲಾ ಮಲೇರಿಯಾ ಮೇಲ್ವಿಚಾರಕ ಕೆ.ಪಿ.ಹಂಪಿಹೊಳಿ ಡೆಂಘೀ ರೋಗದ ಕುರಿತು ಮಾಹಿತಿ ನೀಡಿದರು. ತಾಲೂಕು ಮೇಲ್ವಿಚಾರಕ ಎಂ.ಎಸ್. ಅಂಗಡಿ ಮಲೇರಿಯಾ, ಫೈಲೇರಿಯಾ ರೋಗ ಹರಡುವಿಕೆ ಮತ್ತು ರೋಗ ನಿಯಂತ್ರಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪುರಸಭೆ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿದರು. ಆರ್.ಬಿ.ಅಂಬಿಗೇರ ಕ್ಷಯರೋಗ ನಿಯಂತ್ರಣ ಹಾಗೂ ಚಿಕಿತ್ಸೆ ಮತ್ತು ಸಮುದಾಯದ ಜಾಗೃತಿ ಕುರಿತು ಮಾಹಿತಿ ನೀಡಿದರು.

ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣ, ಪರಿಸರ ಶುಚಿತ್ವ, ಸೊಳ್ಳೆ ಕಚದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು, ಜ್ವರ ಬಂದ ತಕ್ಷಣವೇ ವೈದ್ಯರಲ್ಲಿ ಬಂದು ಚಿಕಿತ್ಸೆ ಪಡೆಯುವುದರಿಂದ ಯಾವುದೆ ತೊಂದರೆ ಆಗುವುದಲ್ಲ ಎಂದರು.

ವೆಂಕಟೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ವಿ.ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಅರವಳಿಕೆ ತಜ್ಞ ಡಾ. ಅನಿಲ್ ಉಕ್ಲಿ ವೈಯಕ್ತಿಕ ಸ್ವಚ್ಛತೆ ಕುರಿತು ಮಾತನಾಡಿದರು. ಗುಳೇದಗುಡ್ಡ ತಾಲೂಕಿನಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗೇರಿ, ತೋಗುಣಸಿ, ಪಟ್ಟದಕಲ್ ಹಾಗೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪಟ್ಟಣದಲ್ಲಿ ಲಾರ್ವಾ ಸಮೀಕ್ಷೆ ಮಾಡಿ ಆರೋಗ್ಯ ಶಿಕ್ಷಣ ನೀಡಿದರು. ಎ.ಎಲ್. ಬಡಿಗೇರ, ವ್ಹಿ.ಎ.ಪಾಟೀಲ್, ಶಂಕರ್ ಔರಸಂಗ್ ಹಾಜರಿದ್ದರು.ಉಮಾ ಇಂಗಳಗಿ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿ ಬಿ.ಎಸ್. ಮುದ್ಲಿ ನಿರೂಪಿಸಿದರು. ಎಂ.ಪಿ. ಪಾಗದ ವಂದಿಸಿದರು.