ಯಲಬುರ್ಗಾ: ಪಟ್ಟಣದಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಮರ್ಪಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ಸಣ್ಣಪುಟ್ಟ ತೊಂದರೆ ಉಂಟಾದಲ್ಲಿ ಪಪಂದಿಂದ ಆರಂಭಿಸಲಾದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಕ್ಷಣ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು.

ಪಟ್ಟಣದಲ್ಲಿ ಸಹಾಯವಾಣಿ ವ್ಯವಸ್ಥೆಯ ಕುರಿತು ಜನಜಾಗೃತಿ ಮೂಡಿಸಲು ಬ್ಯಾನರ್ ಅಂಟಿಸಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಪಟ್ಟಣದ 15 ವಾರ್ಡ್‌ಗಳಲ್ಲಿ ಒಟ್ಟು 32 ಬೋರ್‌ವೆಲ್‌ ಕಾರ್ಯನಿರ್ವಹಣೆಗೆ ತರಲಾಗಿದ್ದು, ಪ್ರತಿಯೊಂದು ವಾರ್ಡ್‌ಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಗುಣಮಟ್ಟ ಕಾಪಾಡುವ ಸಲುವಾಗಿ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಲಾಗುತ್ತಿದ್ದು, ನೀರು ಸಂಗ್ರಹಿಸುವ ಸಿಸ್ಟರ್ನ್‌ಗಳ ಶುದ್ಧೀಕರಣ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ. ಜತೆಗೆ,ಪೈಪ್‌ಲೈನ್‌ಗಳಲ್ಲಿ ಉಂಟಾಗುವ ತಾಂತ್ರಿಕ ದೋಷ ತಕ್ಷಣವೇ ಸರಿಪಡಿಸಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ವಾರ್ಡ್‌ನಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಚಿತವಾಗಿ ಯೋಜನೆ ರೂಪಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಂಡು ಪಪಂಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಪಂ ಸಿಬ್ಬಂದಿ ಉಪಸ್ಥಿತರಿದ್ದರು.