ಮೇವು ಕೊರತೆ ನೀಗಿಸಲು ಮುಂಜಾಗ್ರತಾ ಕ್ರಮ

| Published : Dec 15 2023, 01:30 AM IST

ಸಾರಾಂಶ

ಮೇವು ಕೊರತೆ ನೀಗಿಸಲು ಮುಂಜಾಗ್ರತಾ ಕ್ರಮ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಮೇವು ಬೆಳೆಯಲು ಸೂಕ್ತವಿರುವ ಜಮೀನುಗಳನ್ನು ಗುರುತಿಸಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ವಾರಗಳವರೆಗೆ ಆಗುವಷ್ಟು ಮೇವು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮೇವು ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೇವು ಬೆಳೆಯಲು ಜಮೀನು ಗುರುತಿಸಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.ಸರಕಾರಿ ಕ್ಷೇತ್ರ ಹಾಗೂ ಮುಳುಗಡೆಯಾಗಿ ಭೂಸ್ವಾಧೀನಗೊಂಡ ಪ್ರದೇಶಗಳಲ್ಲಿ ರೈತರಿಗೆ ಮನವೊಲಿಸಿ ಮೇವು ಬೆಳೆಯಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ 6073 ಮೇವಿನ ಬೀಜಗಳ ಮಿನಿ ಕಿಟ್‌ಗಳನ್ನು ವಿತರಿಸಲಾಗಿದ್ದು, ಇನ್ನು 12 ಸಾವಿರ ಮಿನಿಕಿಟ್ ಬರಲಿವೆ. ಅಲ್ಲದೇ 45 ಸಾವಿರ ಮಿನಿಕಿಟ್‌ಗಳ ಬೇಡಿಕೆ ಇಡಲಾಗಿದೆ. ಬಾಗಲಕೋಟೆ ಉಪ ವಿಭಾಗದಲ್ಲಿ 1573 ಎಕರೆ ಹಾಗೂ ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 1116 ಎಕರೆ ಜಮೀನನ್ನು ಗುರುತಿಸಿ, ಮೇವು ಬೆಳೆಯಲು ತೆಗಲುವ ವೆಚ್ಚದ ಸಮೇತ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಕುಡಿಯುವ ನೀರಿಗೆ ಸಂಬಂಧಿಸಿದಂತೆ, ಮಾಹೆವಾರು ಸಮಸ್ಯಾತ್ಮಕ ಗ್ರಾಮಗಳ ಮಾಹಿತಿ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ 625 ಖಾಸಗಿ ಕೊಳವೆಬಾವಿ ಗುರುತಿಸಲಾಗಿದೆ. ಅದರಲ್ಲಿ 378 ಕೊಳವೆಬಾವಿ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ಈಗಾಗಲೇ ಅಗತ್ಯ ಬೋರ್‌ವೆಲ್ ಕೊರೆಯಲಾಗಿದೆ. ಅಲ್ಲದೇ ಯಾವ ಮಾಹೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುವುದನ್ನು ಮಾಹಿತಿ ಪಡೆಯಲಾಗಿದೆ. ಜನರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗುತ್ತಿದ್ದು, ನಿರ್ವಹಣೆಗಾಗಿ ನೇಮಿಸಲಾದ ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕ ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಹೆಸ್ಕಾಂ ಮುಖ್ಯ ಅಧೀಕ್ಷಕ ಕಲಿಂ, ನಗರಸಭೆ ಪೌರಾಯುಕ್ತ ರಮೇಶ ಜಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ಸ್ಥಳ ಗುರುತು: ಅಗತ್ಯವಿರುವ ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ ಕಲಾದಗಿ, ಬಾಗಲಕೋಟೆ, ರಾಂಪೂರ, ಬಾದಾಮಿ ತಾಲೂಕಿನಲ್ಲಿ ಬಾದಾಮಿ ಎಪಿಎಂಸಿ, ಕೆರೂರ ಎಪಿಎಂಸಿ, ಕುಳಗೇರಿ ಹೊಸ ನಾಡಕಚೇರಿ ಆವರಣ, ಗುಳೇದಗುಡ್ಡ ತಾಲೂಕಿನ ಬಸವರಾಜ ಗಾಣಿಗೇರ ಖಾಸಗಿ ಮಾಲೀಕರ ಗೋದಾಮು, ಹುನಗುಂದ ಎ.ಪಿ.ಎಂಸಿ, ಜಮಖಂಡಿಯ ತೊದಲಬಾಗಿ, ಸಾವಳಗಿ, ಲಿಂಗನೂರ, ಕಲಹಳ್ಳಿ, ರಬಕವಿ-ಬನಹಟ್ಟಿಯ ಹನಗಂಡಿ, ಮುಧೋಳ ತಾಲೂಕಿನ ಮುಧೋಳ, ಲೋಕಾಪೂರ, ಬೆಳಗಲಿ, ಬೀಳಗಿ ತಾಲೂಕಿನ ಬೂದಿಹಾಳ ಎಸ್.ಎಚ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ ಎಂದರು.---

(ಫೋಟೊ 14ಬಿಕೆಟಿ 7- )