ಸಾರಾಂಶ
ಜಿಲ್ಲಾ ಆಟದ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ । ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದ ಸಚಿವರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಶ್ಚಿಮಘಟ್ಟದ ಸಾಲಿನಲ್ಲಿರುವ ನಮ್ಮ ಜಿಲ್ಲೆಯಲ್ಲಿ ಕೇರಳದ ವಯನಾಡಿನಲ್ಲಿ ಆದಂತಹ ಪ್ರಕೃತಿ ವಿಕೋಪಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕರೆ ನೀಡಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದ ಸಚಿವರು, ನಮ್ಮ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿಗೆ ಹೊಂದಿಕೊಂಡಿರುವ ನೆರೆ ರಾಜ್ಯವಾದ ಕೇರಳದ ವಯನಾಡು ಪ್ರದೇಶದಲ್ಲಿ ಪ್ರಕೃತಿ ವಿಕೋಪ ಮತ್ತು ಅದರಿಂದ ಉಂಟಾದ ಸಾವು ನೋವು ಹಾಗೂ ಸಮಸ್ಯೆ ನೋಡಿದಾಗ ಅದೇ ರೀತಿಯ ಪರಿಸರ ಹೊಂದಿರುವ ನಮ್ಮ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಈ ಕುರಿತು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ತುರ್ತು ಸಂದರ್ಭ ಬಂದಿದೆ ಎಂದು ಹೇಳಿದರು.ಪ್ರಕೃತಿ ವಿಕೋಪದ ನಡುವೆಯೂ ಒಂದು ಸಮಾಧಾನ ತರುವ ವಿಷಯವೆಂದರೆ ಸಕಲ ಜೀವ ರಾಶಿಗಳಿಗೆ ಭೂಮಿಯ ಮೇಲೆ ಬದುಕಲು ಅತಿ ಅವಶ್ಯಕವಾಗಿ ಬೇಕಾಗಿರುವುದು ನೀರು. ಅದಕ್ಕೆ ಪೂರಕವಾಗಿ ಉತ್ತಮ ರೀತಿ ಮಳೆ ಜಿಲ್ಲೆಯಾದ್ಯಂತ ಆಗಿರುವುದರಿಂದ ಎಲ್ಲಾ ಕೆರೆ ಕಟ್ಟೆ ಹಾಗೂ ಪ್ರಮುಖ ನದಿಗಳು ಮೈದುಂಬಿ ಹರಿದು ಅಣೆಕಟ್ಟೆಗಳು ತುಂಬಿದ್ದು ಅವುಗಳಿಗೆ ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ.
ನಾವು ಭಾರತೀಯರು ಆಂಗ್ಲರ ಕಪಿಮುಷ್ಠಿಯಿಂದ ಸ್ವಾತಂತ್ರ್ಯರಾಗಿ ಇಂದಿಗೆ 77 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ದಿನಾಚರಣೆ ಎಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದ ಆಚರಣೆ ಮಾತ್ರವಲ್ಲ. ಈ ನೆಲ, ಜಲ ಹಾಗೂ ಈ ದೇಶದ ಸಂಸ್ಕೃತಿ ಪರಕೀಯರಿಂದ ಮುಕ್ತವಾದ ಅಭಿಮಾನದ ಸ್ವಾತಂತ್ರ್ಯವನ್ನು ಅನುಭವಿಸಿದ ಕ್ಷಣವನ್ನು ಮೆಲುಕು ಹಾಕುವ ಸಂತಸದ ದಿನ ಇದಾಗಿದೆ.ಸ್ವಾತಂತ್ರ್ಯ ಪಡೆಯಲು ನಡೆದ ಹಲವು ಹೋರಾಟಗಳು ಮತ್ತು ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಾ ಅವರಲ್ಲಿ ಅನೇಕರು ವೈಯಕ್ತಿಕ ಸುಖ, ಸಂತೋಷ ಎಲ್ಲವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಬಲಿಯಾದವರು. ಹೋರಾಟದಲ್ಲಿ ಪೆಟ್ಟು ತಿಂದ, ಸೆರೆಮನೆ ವಾಸ ಅನುಭವಿಸಿದ ಸಹಸ್ರಾರು ದೇಶಭಕ್ತರನ್ನು ನೆನಪಿಸಿಕೊಳ್ಳುವ ಸುದಿನ ಎಂದರು.ಕಾಂಗ್ರೆಸ್ ಸಾಧನೆ ಮಹತ್ವದ್ದುಭಾರತ ಸ್ವಾತಂತ್ರ್ಯ ಅಭಿಯಾನದಲ್ಲಿ ಕಾಂಗ್ರೆಸ್‌ನ ಒಟ್ಟಾರೆ ಸಾಧನೆ ಅತ್ಯಂತ ಮಹತ್ವದ್ದು. ಅದೇ ರೀತಿಯಲ್ಲಿ ನಮ್ಮ ರಾಜ್ಯದ ಜನರಿಗೆ ಒಳ್ಳೆಯ ಆಡಳಿತದ ಸುಭದ್ರತೆ ನೀಡಬೇಕೆಂಬುದು ಕಾಂಗ್ರೆಸ್ ಪಕ್ಷದ ದೃಢ ಸಂಕಲ್. 2023 ರ ಜೂನ್ ತಿಂಗಳಲ್ಲಿ ಆಸ್ತಿತ್ವಕ್ಕೆ ಬಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ದೀನ ದಲಿತರ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮತ್ತು ದುರ್ಬಲರ ಏಳಿಗೆಗಾಗಿಯೇ ಶ್ರಮಿಸುತ್ತೇವೆ ಎಂಬ ಧ್ಯೇಯ ದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ನಮ್ಮ ರಾಜ್ಯದ ಕಾರ್ಯಾಂಗ ವ್ಯವಸ್ಥೆಯ ಮೂಲಾಧಾರಿಗಳಾದ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸ್ಸು ಗಳನ್ನು ಯಥಾವತ್ತಾಗಿ ಜಾರಿಗೆ ತಂದಿರುವುದು ಸಹ ನಮ್ಮ ಸರ್ಕಾರದ ಸಾಧನೆ, ಇದರಿಂದ ನಮ್ಮ ಜಿಲ್ಲೆಯ ಒಟ್ಟು ಸುಮಾರು 14 ಸಾವಿರ ಸರ್ಕಾರಿ ನೌಕರರಲ್ಲಿ ಸಂತಸ ಮೂಡಿಸಿದ ಸಾರ್ಥಕತೆ ನಮ್ಮದು ಎಂದರು.ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಒಟ್ಟು 1265 ಕೋಟಿ ರು.ಗಳ ಕುಡಿಯುವ ನೀರು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದ ಸಚಿವರು, ಸೌರ ವಿದ್ಯುತ್ ಕಲ್ಪಿಸುವ ಕೆಯುಎಸ್‌ಯುಎಂ- ಸಿ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ 85 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುತ್ತಿದ್ದು ಹಲವಾರು ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿದೆ. ಅಭಿವೃದ್ಧಿ ಗುರುತಿಸುವ ಮಾನದಂಡಗಳಲ್ಲಿ ಮುಖ್ಯ ಮಾನದಂಡವಾದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ 3ನೇ ಸ್ಥಾನದಲ್ಲಿರುವುದು ಸಂತಸದ ವಿಷಯವಾಗಿದ್ದರೂ, ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆ ಪರಿಸರ ಕಾಳಜಿ, ಪ್ರಾಕೃತಿಕ ಅನಾಹುತ ತಡೆಗಟ್ಟುವ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಸುಧಾರಿತ ಅಭಿವೃದ್ಧಿ ಸಾಧಿಸುವಲ್ಲಿ ನಮ್ಮ ಜಿಲ್ಲೆಯ ಎಲ್ಲಾ ನಾಗರಿಕರ ಪಾತ್ರ ಬಹಳ ದೊಡ್ಡದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು, ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.--
ಗ್ಯಾರಂಟಿ ಪರಿಷ್ಕರಣೆ, ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ: ಸಚಿವ ಕೆ.ಜೆ. ಜಾರ್ಜ್ಚಿಕ್ಕಮಗಳೂರು: ಬಿಜೆಪಿಯವರಿಗೆ ಅವರ ಜೀವಮಾನದಲ್ಲಿ ಹೊಸ ಯೋಜನೆ ಮಾಡಲು ಆಗಿಲ್ಲ, 5 ಗ್ಯಾರಂಟಿಗಳ ಯೋಜನೆಗಳು, ಸಾಮಾನ್ಯ ಜನ, ಮಹಿಳೆಯರಿಗೆ ಕೊಡುವ ಕೆಲಸ ಮಾಡಿದ್ರಾ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ, ಸಚಿವರಿಗೆ, ಶಾಸಕರಿಗೆ ವೈಯಕ್ತಿಕ ಅಭಿಪ್ರಾಯ ಹೇಳಲು ಹಕ್ಕಿದೆ. ಅವರು ಹೇಳೋದು ತಪ್ಪಲ್ಲ, ಗ್ಯಾರಂಟಿ ಯೋಜನೆ. ಅದು ಕ್ಯಾಬಿನೆಟ್‌ನಲ್ಲಿ ಆಗಿರುವ ತೀರ್ಮಾನ, ಕ್ಯಾಬಿನೆಟ್ ನಲ್ಲಿ ಬರಬೇಕು ಎಂದು ಹೇಳಿದರು. ಕೊವೀಡ್ ಸರಿಯಾಗಿ ನಿರ್ವಹಣೆ ಮಾಡಿಲ್ಲ, ನೋಟು ಅಮಾನೀಕರಣ ಮಾಡಿ ಜನರನ್ನ ಕಷ್ಟಕ್ಕೆ ತಳ್ಳಿದವರು ಯಾರು ? ಅದಕ್ಕೆ ನಾವು ಈ ತರ ಕಾರ್ಯಕ್ರಮಗಳನ್ನ ನೀಡಿ ಜನರ ಕೈ ಬಲ ಪಡಿಸುತ್ತಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ ಯಾವುದೇ ಪರಿಷ್ಕರಣೆ ಇಲ್ಲ ಎಂದರು. 15 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು. 15 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆಗೆ ಸಾಮೂಹಿಕ ಕವಾಯತು ನಡೆಯಿತು.