ಸಾರಾಂಶ
- ನೋಡಲ್ ಅಧಿಕಾರಿಗಳು ಆಗಾಗ ಸಭೆ ನಡೆಸಬೇಕು । ಚಿಕ್ಕಮಗಳೂರು ಕ್ಷೇತ್ರದ ಬರ ನಿರ್ವಹಣಾ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈ ಬಾರಿ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಅಂತಹ ಗ್ರಾಮಗಳ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬರಗಾಲ ನಿರ್ವಹಣೆಗೆ ಸಂಬಂಧಿಸಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಕ್ಕಮಗಳೂರು ಕ್ಷೇತ್ರದ 8 ಹೋಬಳಿಗಳ 47 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಸದ್ಯ ಅಲ್ಲಿರುವ ಕುಡಿಯುವ ನೀರಿನ ಸ್ಥಿತಿಗತಿ ಅವಲೋಕನ ಮಾಡಿ, ನೀರಿನ ಕೊರತೆ ಎದುರಾಗುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.ಕುಡಿಯುವ ನೀರಿನ ಅಭಾವವಿರುವ ಕಡೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಒದಗಿಸಲು ಕ್ರಮಕೈಗೊಳ್ಳಬೇಕು, ಕುಡಿವ ನೀರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ, ಶಾಲಾ ಕಾಲೇಜು, ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಂಬಂಧಪಟ್ಟವರು ನಿಗಾ ವಹಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಮಾಹಿತಿ ಪಡೆಯಬೇಕು, ಜನ, ಜಾನುವಾರುಗಳಿಗೆ ಆಹಾರ, ಕುಡಿಯುವ ನೀರು, ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದ ಅವರು, ಹೋಬಳಿಗೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಆಯಾಯ ಹೋಬಳಿವಾರು ಅಲ್ಲಿನ ಜನಪ್ರತಿ ನಿಧಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಬಗೆಹರಿಸಬೇಕೆಂದು ತಿಳಿಸಿದರು.
ಚಿಕ್ಕಮಗಳೂರು ಕಸಬಾ ಹಾಗೂ ಲಕ್ಯಾ ಹೋಬಳಿಗಳು ಬರ ಕಂಡು ಬರುವ ಪ್ರದೇಶಗಳಾಗಿದ್ದು, ಈ ಭಾಗದ ಎಲ್ಲಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟ ಅಂದಾಜು ಮಾಡಿ ಬೆಳೆ ವಿಮೆಯನ್ನು ರೈತರಿಗೆ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ನಮ್ಮ ಜಿಲ್ಲೆಯಿಂದ ಬೇರೆಡೆಗೆ ಮೇವನ್ನು ಸಾಗಿಸುವುದನ್ನು ತಡೆಯಬೇಕು ಎಂದರು.ತಹಸೀಲ್ದಾರ್ ಡಾ. ಸುಮಂತ್ ಮಾತನಾಡಿ, ಬರಗಾಲ ಇರುವುದರಿಂದ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸಮನ್ವತೆಯಿಂದ ಕೆಲಸ ಮಾಡಬೇಕು. ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.9 ಕೆಸಿಕೆಎಂ 5ಚಿಕ್ಕಮಗಳೂರು ತಾಪಂ ಸಭಾಂಗಣದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ಬರಗಾಲ ನಿರ್ವಹಣಾ ಸಭೆ ಮಂಗಳವಾರ ನಡೆಯಿತು. ತಹಸೀಲ್ದಾರ್ ಡಾ. ಸುಮಂತ್, ತಾಪಂ ಇಒ ತಾರಾನಾಥ್ ಇದ್ದರು.