ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಆದ್ಯತೆ: ಮಂಜನಾಥ ನೀಲಗುಂದ

| Published : Feb 27 2024, 01:30 AM IST

ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಆದ್ಯತೆ: ಮಂಜನಾಥ ನೀಲಗುಂದ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಶ್ರೀನಿವಾಸ ಮಾನೆ ಅವರು ತಾಲೂಕಿನಾದ್ಯಂತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಮೊದಲ ಆದ್ಯತೆಯಾಗಿ ಪ್ರಾಥಮಿಕ, ಪ್ರೌಢ ಹಂತದಿಂದಲೇ ಅತ್ಯುತ್ತಮ ಜ್ಞಾನಾರ್ಜನೆಗೆ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಹೆಚ್ಚು ಅವಕಾಶ ನೀಡಿ ಕೆಲಸ ಮಾಡುತ್ತಿದೆ ಎಂದು ಯುವ ಮುಖಂಡ ಮಂಜನಾಥ ನೀಲಗುಂದ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರದಿಂದ ನಡೆಯುತ್ತಿದ್ದ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರದ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಈಗ ಶಿಕ್ಷಣ ಸಿಗುತ್ತಿದೆ. ಆದರೆ ರಾಷ್ಟ್ರಮಟ್ಟದ ಸ್ಪರ್ಧೆ ಯುಗದಲ್ಲಿರುವ ಈ ಕಾಲದಲ್ಲಿ ಸ್ಪರ್ಧಾತ್ಮಕ ಜಯಕ್ಕಾಗಿ ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿಯೇ ಶಾಸಕ ಶ್ರೀನಿವಾಸ ಮಾನೆ ಅವರು ತಾಲೂಕಿನಾದ್ಯಂತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ವಿದ್ಯಾವಂತರೆಲ್ಲರಿಗೂ ಉದ್ಯೋಗಾವಕಾಶ ಸಿಗಬೇಕು ಎಂಬ ಆಶಯ ಅವರದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹ್ಯುಮ್ಯಾನಿಟಿ ಫೌಂಡೇಶನ್‌ನ ಸಂಸ್ಥಾಪಕಿ ಸ್ವಾತಿ ಮಾಳಗಿ ಮಾತನಾಡಿ, ಶಿಕ್ಷಣಕ್ಕಾಗಿ ಒಳ್ಳೆಯ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ. ಅದನ್ನು ಸದುಪಯೋಗ ಮಾಡಿಕೊಂಡು ಸ್ಪರ್ಧಾ ವಿಜಯಿಗಳಾಗುವುದು ನಿಮ್ಮ ಜವಾಬ್ದಾರಿ. ಎಲ್ಲ ವಿದ್ಯಾರ್ಥಿಗಳ ಪಾಲಕರು ಮಕ್ಕಳಿಗಾಗಿ ಹಲವು ಕನಸು ಕಟ್ಟಿರುತ್ತಾರೆ. ಅವರ ಕನಸನ್ನು ಸಾಕಾರ ಮಾಡುವುದರ ಜೊತೆಗೆ ನಿಮ್ಮ ಬದುಕನ್ನೂ ಕಟ್ಟಿಕೊಳ್ಳುವುದು ಮುಖ್ಯವಾಗಬೇಕು. ಸರ್ಕಾರಿ ಉದ್ಯೋಗಗಳನ್ನೇ ನಂಬಿಕೊಳ್ಳುವುದಲ್ಲ. ಈಗ ಖಾಸಗಿ ಉದ್ಯಮಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಪ್ರಾಮಾಣಿಕ ದುಡಿಮೆಗೆ ಎಲ್ಲ ಕಾಲಗಳಲ್ಲೂ ಗೌರವವಿದೆ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ, ಉಪನ್ಯಾಸಕರಾದ ಅನಂತ ಸಿಡೇನೂರು, ಲಕ್ಕಪ್ಪ ಜಿರ್ಲಿ, ವಿ. ಶ್ರೀಧರ, ಎಂ. ನಾಗರಾಜ, ಮುಸ್ತಾಕ ಹಾದಿಮನಿ, ಎನ್.ವಿ. ಅಮೃತ್, ರೇವಣಯ್ಯ ಹಾಗೂ ಮಂಜು ಬಾರ್ಕಿ ಪಾಲ್ಗೊಂಡಿದ್ದರು.