ಸಾರಾಂಶ
ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಪ್ರಾಂಶುಪಾಲ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪಿ.ಎಸ್.ಮಂಜೇಗೌಡ ಮನವಿ ಮಾಡಿದರು. ಬೇಲೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ಚುನಾವಣೆಗೆ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಬೇಲೂರುದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ತಾಲೂಕಿನ ಮತದಾರರಲ್ಲಿ ಪ್ರಾಂಶುಪಾಲ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪಿ.ಎಸ್.ಮಂಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡರು ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ನಂತರ ೨೦೦೦ ದಿಂದ ೨೦೨೪ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕ ಸಮುದಾಯವನ್ನು ಪಕ್ಷ ಜಾತಿ, ಧರ್ಮ ಎನ್ನದೆ ಗೌರವಿಸುತ್ತ ಶಿಕ್ಷಣ ಕ್ಷೇತ್ರದ ಘನತೆ, ಪಾವಿತ್ರ್ಯತೆ ಮತ್ತು ಆತ್ಮಾಭಿಮಾನಕ್ಕೆ ಲೋಪವಾಗದಂತೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಶ್ರದ್ಧೆ, ಬದ್ಧತೆಯ ಹೋರಾಟಗಳಿಂದ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ’ ಎಂದು ಹೇಳಿದರು. ‘ಪ್ರಾಥಾಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವ್ಯಾಪ್ತಿಯ ಎಲ್ಲ ಬೋಧಕ ಹಾಗೂ ಬೋಧಕೇತರರ ಸ್ಥಿತಿ-ಗತಿಗಳನ್ನು ಅರ್ಥ ಮಾಡಿಕೊಂಡು, ಶಿಕ್ಷಕ ಸಮುದಾಯ ಮತ್ತುನ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಚಳುವಳಿಗಳಲ್ಲಿ ಭಾಗವಹಿಸಿ ಸದನದ ಒಳಗೂ-ಹೊರಗೂ ನಿರಂತರವಾಗಿ ಸಮಸ್ಯೆಗಳ ನಿವಾರಣೆಗೆ ನಿಂತವರು. ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರೊಂದಿಗೆ ಪಕ್ಷಾತೀತವಾಗಿ ಸಮಸ್ಯೆಗಳಿಗೆ ಪರಿಹಾರ ತಂದುಕೊಡಲು ಶ್ರಮ ವಹಿಸಿದ್ದಾರೆ’ ಎಂದು ತಿಳಿಸಿದರು.‘ಮುಖ್ಯಮಂತ್ರಿ ಹಾಗೂ ಸರ್ಕಾರದ ಸಚಿವರ ಜತೆ ಆತ್ಮಿಯವಾಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಡಲಿದ್ದಾರೆ. ಆದ್ದರಿಂದ ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ರ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು.
ಪುರಸಭೆ ಮಾಜಿ ಸದಸ್ಯ ಬಿ.ಎಲ್.ಧರ್ಮೇಗೌಡ, ತಾಪಂ ಮಾಜಿ ಸದಸ್ಯ ಮಂಜುನಾಥ್, ಕಾಂಗ್ರೆಸ್ ಮುಖಂಡ ರಾಯಾಪುರ ಶಿವಣ್ಣ ಇದ್ದರು.