ಸಾರಾಂಶ
ಬೆಳಗಾವಿ ತಾಲೂಕಿನ ಮಚ್ಛೆಯಲ್ಲಿ ಗರ್ಭಿಣಿಯೊಬ್ಬಳು ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿಯೇ ಕೊಲೆ ಮಾಡಿದ್ದಾನೆ ಎಂದು ಮೃತಳ ಸಂಬಂಧಿಕರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಮಚ್ಚೆಯಲ್ಲಿ ಗರ್ಭಿಣಿಯೊಬ್ಬಳು ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿಯೇ ಕೊಲೆ ಮಾಡಿದ್ದಾನೆ ಎಂದು ಮೃತಳ ಸಂಬಂಧಿಕರು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾಲೂಕಿನ ಮಚ್ಚೆ ಪಟ್ಟಣದ ಮಂಜುಳಾ ಬೋರೇಶ್ ಗಡ್ಡಿಹೊಳಿ (22) ಮೃತ ಮಹಿಳೆ. ಮೂಲತಃ ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ಅಲಯಾಸ್ ನಯನಾ (23) ಹಾಗೂ ಬೆಳಗಾವಿ ಮಚ್ಚೆ ಪಟ್ಟಣದ ಬೋರೇಶ್ ಗದ್ದಿಹೊಳಿಗೂ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ವೇಳೆ ಪರಸ್ಪರ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಯುವತಿಯ ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಹೋಗಿ ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ದರು. ವಿಷಯ ತಿಳಿದ ಮಂಜುಳಾ ಕುಟುಂಬಸ್ಥರು ಬೆಳಗಾವಿಗೆ ಆಗಮಿಸಿ ಯುವತಿಯನ್ನು ಮರಳಿ ಊರಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಂದ ಪರಾರಿಯಾಗಿ ಬೆಳಗಾವಿಗೆ ಬಂದ ಮಂಜುಳಾ ಪತಿಯೊಂದಿಗೆ ಮಚ್ಛೆಯಲ್ಲಿ ವಾಸವಾಗಿದ್ದಳು. ಆರಂಭದಲ್ಲಿ ದಾಂಪತ್ಯದಲ್ಲಿ ಎಲ್ಲವೂ ಚೆನ್ನಾಗಿತ್ತು. ಈಚೆಗೆ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಶುಕ್ರವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಮಂಜುಳಾ ಶವ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಡಿಸಿಪಿ ರೋಹಣ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆದರು. ಪತಿ ಬೋರೇಶ್ ಗಡ್ಡಿಹೊಳಿ ಹಾಗೂ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಡಿಸಿಪಿ ರೋಹನ್ ಜಗದೀಶ ಮಾತನಾಡಿ, ಮಂಜುಳಾಗೆ ಆರಂಭದಿಂದಲೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು. ಅವಳ ಪತಿ ಹಾಗೂ ಮನೆಯವರು ಕೊಲೆ ಮಾಡಿ, ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಹೀಗಾಗಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮದುವೆಯಾಗಿ 7 ವರ್ಷದೊಳಗೆ ಗೃಹಿಣಿ ಮೃತಪಟ್ಟರೆ ಅದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತನಿಖೆ ಮಾಡಬೇಕಾಗುತ್ತದೆ. ಕೌಟುಂಬಿಕ ಕಿರುಕುಳ, ಕೊಲೆಯ ಶಂಕೆ ಅಡಿ ಈ ಪ್ರಕರಣ ಪರಿಗಣಿಸುತ್ತೇವೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.