ಗರ್ಭಿಣಿ, ಶಿಶು ತಪಾಸಣೆ ನಿರ್ಲಕ್ಷ್ಯ ಸಲ್ಲದು: ಡಿಎಚ್‌ಒ

| Published : Sep 20 2024, 01:33 AM IST

ಸಾರಾಂಶ

ಶಿಶು ಮರಣ, ತಾಯಿ ಮರಣ ತಡೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಬೇಕು.

ಬಳ್ಳಾರಿ: ಗರ್ಭಿಣಿಯರು ಮತ್ತು ನವಜಾತ ಶಿಶುವಿಗೆ ಮಾಡಿಸಬೇಕಾದ ತಪಾಸಣೆಗಳನ್ನು ನಿರ್ಲ್ಯಕ್ಷಿಸುವಂತಿಲ್ಲ. ಶಿಶು ಮರಣ, ತಾಯಿ ಮರಣ ತಡೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಶು ಹಾಗೂ ತಾಯಿ ಮರಣ ಕುರಿತ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮನೆ ಭೇಟಿಯ ಮೂಲಕ ಕುಟುಂಬದ ಸದಸ್ಯರಿಗೆ ಅವರ ವೈಯಕ್ತಿಕ ಕೆಲಸಗಳ ಕಾರಣದಿಂದ ತಪಾಸಣೆಗೆ ವಿಳಂಬ ಮಾಡದಂತೆ ಮನವೊಲಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಗಂಡಾಂತರ ಗರ್ಭಿಣಿಯರು ಎಂದು ಗುರುತಿಸಿದ ನಂತರ ನಿರಂತರ ನಿಗಾ ಇಡಬೇಕು. ರಕ್ತದೊತ್ತಡ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ಅಗತ್ಯ ವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ಕಳುಹಿಸಬೇಕು ಎಂದು ತಿಳಿಸಿದರು.

ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಿಂದ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಲು ಸೂಚಿಸಬೇಕು ಎಂದರು.

ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ್-ಟಿ, ನಿರೋಧ ಕುರಿತು ಸಮುದಾಯದಲ್ಲಿ ಆರೋಗ್ಯ ಶಿಕ್ಷಣ ನೀಡಬೇಕು. ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಂದರ್ಭದಲ್ಲಿ ತಕ್ಷಣವೇ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಡಿಹೆಚ್‌ಒ ಅವರು ಹೇಳಿದರು.

ಹೆರಿಗೆ ವಿಷಯವನ್ನು ಆದ್ಯತೆಯಾಗಿಟ್ಟುಕೊಂಡು ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೈಕೆ ಕುರಿತು ನಿಗಾ ವಹಿಸಲು ಕ್ರಮ ವಹಿಸಬೇಕು ಎಂದರು.

ವಿಮ್ಸ್ ಪ್ರಸೂತಿ ವಿಭಾಗದ ಮುಖಸ್ಥರಾದ ಡಾ.ಆಶಾರಾಣಿ ಮಾತನಾಡಿದರು.

ಸಭೆಯಲ್ಲಿ ವಿಮ್ಸ್ ಪ್ರಸೂತಿ ತಜ್ಞೆ ಡಾ.ಆಶಾರಾಣಿ, ವಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆಸ್ಪತ್ರೆ ಪ್ರಸೂತಿ ತಜ್ಞ ಡಾ.ಅಶ್ರಫ್ ಅಲಿ, ಮಕ್ಕಳ ತಜ್ಞ ಡಾ.ಬಾಲು ವೆಂಕಟೇಶಲು, ವಿಮ್ಸ್ ಎಸ್‌ಎನ್‌ಸಿಯು ನೋಡಲ್ ಅಧಿಕಾರಿ ಡಾ.ರಾಜೇಶ್ ಡಿ ಸೇರಿದಂತೆ ಡಾ.ಈರಣ್ಣ, ಡಾ.ಮಂಜುನಾಥ ಜವಳಿ, ಡಾ.ಅರುಣಕುಮಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಿಎನ್‌ಒ ಗಿರೀಶ್ ಹಾಗೂ ವೈದ್ಯಾಧಿಕಾರಿಗಳು, ಪಿಎಚ್‌ಸಿಒ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.