ಗರ್ಭಿಣಿಯರಲ್ಲಿ ಜಾಗರೂಕತೆ ಅಗತ್ಯ: ಶಾಸಕ ಸುರೇಶ ಬಾಬು

| Published : Jun 19 2025, 11:48 PM IST

ಸಾರಾಂಶ

ವಿಧಾನಸಭಾ ಕ್ಷೇತ್ರದ ಗರ್ಭಿಣಿಯರಿಗಾಗಿ ಏರ್ಪಡಿಸಲಾಗಿರುವ ಸೀಮಂತ ಕಾರ್ಯಕ್ರಮ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಗರ್ಭಿಣಿಯರು ಒಳ್ಳೆಯ ಆಹಾರ, ಶುಚಿತ್ವವನ್ನು ಕಾಪಾಡಿಕೊಂಡು ಆರೋಗ್ಯವಂತ ಮಗುವಿಗೆ ಜನ್ಮ ನೀಡಿ ಎಂದು ಶಾಸಕ ಸಿಬಿ ಸುರೇಶ ಬಾಬು ಕರೆ ನೀಡಿದರು

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ವಿಧಾನಸಭಾ ಕ್ಷೇತ್ರದ ಗರ್ಭಿಣಿಯರಿಗಾಗಿ ಏರ್ಪಡಿಸಲಾಗಿರುವ ಸೀಮಂತ ಕಾರ್ಯಕ್ರಮ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಗರ್ಭಿಣಿಯರು ಒಳ್ಳೆಯ ಆಹಾರ, ಶುಚಿತ್ವವನ್ನು ಕಾಪಾಡಿಕೊಂಡು ಆರೋಗ್ಯವಂತ ಮಗುವಿಗೆ ಜನ್ಮ ನೀಡಿ ಎಂದು ಶಾಸಕ ಸಿಬಿ ಸುರೇಶ ಬಾಬು ಕರೆ ನೀಡಿದರು.

ಗುರುವಾರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಎಸ್ ಬಿ ಚಾರಿಟಬಲ್ ವತಿಯಿಂದ ಆಯೋಜಿಸಿದ್ದ ತವರಿನ ಮಡಿಲು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ನಮ್ಮ ಎಸ್.ಬಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದ್ದು ಯಾವುದೇ ಜಾತಿ ಧರ್ಮ ಕ್ಕೆ ಸೀಮಿತವಾಗಿಲ್ಲ. ಈ ಕಾರ್ಯಕ್ರಮವನ್ನು ನಿಮ್ಮ ಮನೆಯ ಮಗನಾಗಿ , ಅಣ್ಣನಾಗಿ ನಡೆಸಿಕೊಂಡು ಬರುತ್ತಿದ್ದು ಮಕ್ಕಳಿಗೆ ರಕ್ತಹೀನತೆ ಅಪೌಷ್ಟಿಕತೆ ಸೃಷ್ಟಿಯಾಗದಂತೆ ಗರ್ಭಿಣಿಯರು ಜಾಗರೂಕತೆಯಿಂದ ಜೀವನ ನಿರ್ವಹಿಸಿ ಈ ದೇಶದ ಸತ್ಪ್ರಜೆಯನ್ನು ನೀಡಬೇಕು. ಗರ್ಭಿಣಿಯರು ಟಿವಿಯಲ್ಲಿ ಬರುವ ಕೆಟ್ಟ ಧಾರವಾಹಿಗಳನ್ನು ನೋಡಬೇಡಿ. ಕೌಟುಂಬಿಕ ಕಲಹ ಬೇಜವಾಬ್ದಾರಿ ಜೀವನದಿಂದ ದೂರವಿರಿ. ಐದು ತಿಂಗಳ ನಂತರ ಮಗು ಬೆಳವಣಿಗೆ ರೂಪದಲ್ಲಿರುವಾಗಲೇ ಜೀರ್ಣಶಕ್ತಿಯನ್ನು ಕಂಡುಕೊಂಡಿರುತ್ತದೆ ಹಾಗಾಗಿ ಒಳ್ಳೆಯ ಸದೃಢತೆಯಿಂದ ಬಾಳಿ ಬದುಕಿ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ತ್ರೀ ರೋಗ ತಜ್ಞೆ ದೊಡ್ಡಮನೆ ಡಾ. ಹನುಮಕ್ಕ ಮಾತನಾಡಿ, ಶಿಶು - ತಾಯಿ ಮರಣ ದಿನೇ ದಿನೇ ಹೆಚ್ಚುತ್ತಿದ್ದು ದುರದೃಷ್ಟಕರ. ಮನೆಯಲ್ಲಿ ಸಿಗುವಂತಹ ಸೊಪ್ಪು ತರಕಾರಿಗಳನ್ನು ಸೇವಿಸಿ. ಸರಿಯಾದ ಸಮಯಕ್ಕೆ ಊಟ ನಿದ್ದೆ ಮಾಡಿ. ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಆಗುವುದನ್ನು ತಪ್ಪಿಸಿ. ಸರಿಯಾದ ಸಮಯಕ್ಕೆ ವೈದ್ಯರ ಸಲಹೆ ಪಡೆಯಿರಿ ಹಾಗೂ ಕಷ್ಟ ಬಂದರೆ ಶಾಸಕರನ್ನು ಮತ್ತು ನನ್ನನ್ನು ಸಹ ಸಂಪರ್ಕಿಸಿ ಸಲಹೆ ಸೂಚನೆ ಪಡೆಯಿರಿ ಎಂದರು.

ಈ ಕಾರ್ಯಕ್ರಮದಲ್ಲಿ ಡಾ. ಮುಕ್ತಾಂಭ, ಸೋನಿಯ ವರ್ನೇಕರ್, ಅನುಪಮ, ಡಾ. ಚಂದ್ರಶೇಖರ್, ಮತ್ತು ತಾಲ್ಲೂಕಿನ ಎಲ್ಲಾ ಕಿರಿಯ ಅಧಿಕಾರಿಗಳು ಮತ್ತು ಎಲ್ಲಾ ಇಲಾಖಾ ನೌಕರರು, ಪ್ರಜಾಪ್ರತಿನಿಧಿಗಳು ಭಾಗವಹಿಸಿದ್ದರು.