ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾರುತಿ ಯುವಕರ ಸಂಘದ ವತಿಯಿಂದ ಡಿ. 13 ರಿಂದ 21ರವರೆಗೆ ಹನುಮ ಜಯಂತಿ ಆಚರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಸಂಘದ ಖಜಾಂಚಿ ಕೆಂಚಿ ಮಂಜು ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಮಾರುತಿ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಧರ್ಮಗಳ ಸಮಾಜಗಳ ಮುಖಂಡರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರ ತಿಳಿಸಿದ ಅವರು ಹತ್ತು ದಿನಗಳ ಕಾಲ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು. ಡಿ. 13ರಂದು ದೇವಾಲಯದಲ್ಲಿ ಆಂಜನೇಯಸ್ವಾಮಿ ಮೂರ್ತಿಗೆ ಸಾಮೂಹಿಕ ಕ್ಷೀರಾಭಿಷೇಕ ನಡೆಯಲಿದ್ದು ಮಧ್ಯಾಹ್ನ ಪ್ರಸಾದ ವಿನಿಯೋಗ ಏರ್ಪಡಿಸಿದ್ದು, ಸಂಜೆ ಮಹಾ ಮಂಗಳಾರತಿ ಮಾಡಲಿದ್ದು, 14ರಂದು ಬೆಳಗ್ಗೆ ನವಗ್ರಹ ಹೋಮ, ಕಳಸಾರಾಧನೆ, ಮಂಗಳಾರಿ, ತೀರ್ಥಪ್ರಸಾದ ವಿನಿಯೋಗ ಮಾಡಿ ಮಧ್ಯಾಹ್ನ ತುಳಸಿ ಲಕ್ಷಾರ್ಚನೆ, ಅಷ್ಟಾವಧಾನ ಸೇವೆ, ಪ್ರಸಾದ ವಿನಿಯೋಗ, ಸಂಜೆ 4.30ಕ್ಕೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 15ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ಸಾರ್ವಜನಿಕ ಸತ್ಯನಾರಾಯಣಪೂಜೆ, ತೀರ್ಥಪ್ರಸಾದ ವಿನಿಯೋಗ, ಸಂಜೆ ಉತ್ಸವ ಮೂರ್ತಿಗೆ ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು ರಾತ್ರಿ 10,001 ದೀಪೋತ್ಸವ ಮತ್ತು ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದರು. ಉತ್ಸವ ಮೂರ್ತಿಗೆ ಅಭಿಷೇಕ ಅಲಂಕಾರ ಮಾಡಿ ಮಧ್ಯಾಹ್ನ 12.30ಕ್ಕೆ ದೇವಾಲಯದ ಮುಂಭಾಗ ಸಾಲುಪಂಕ್ತಿ ಅನ್ನಸಂತರ್ಪಣೆ ನಡೆಸಲಿದ್ದು ಸಂಜೆ 4.30ಕ್ಕೆ ಸೀತಾರಾಮ ಕಲ್ಯಾಣೋತ್ಸವ ನಡೆಸಿ ಆನಂತರ ಮಹಾ ಮಂಗಳಾರತಿ ಮಾಡಲಿದ್ದು, 17ರಂದು ಉತ್ಸವ ಮೂರ್ತಿಗೆ ಎಳನೀರು ಅಭಿಷೇಕ, ಪವನ ಹೋಮ, ಹಾಗೂ ಪೂರ್ಣಾಹುತಿ ನೆರವೇರಿಸಿ ಸಂಜೆ 4.30ಕ್ಕೆ ಸ್ವಾಮಿಯವರಿಗೆ ಅಷ್ಟಾವಧಾನ ಸೇವೆ ಮಾಡಿ ಅಲಂಕಾರ ಆರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಿದ್ದು, ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಪ್ರಕಟಿಸಿದರು. 18ರ ಬೆಳಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ ಅಲಂಕಾರ ಹಾಗೂ ಸಾಮೂಹಿಕ ಸಾರ್ವಜನಿಕ ಮಹಾ ಮಂಗಳಾರತಿ ನೆರವೇರಿಸಿ ಸಂಜೆ 4.30ಕ್ಕೆ ತೀರ್ಥಪ್ರಸಾದ ನೀಡಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ 19ರಂದು ಆಂಜನೇಯಸ್ವಾಮಿ ಮೂರ್ತಿಗೆ ಕೊಬ್ಬರಿ ಎಣ್ಣೆ ಮಜ್ಜನ , ಸಂಜೆ 4.30ಕ್ಕೆ ಲಕ್ಷ ಕುಂಕುಮಾರ್ಚನೆ ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು. 20ರಂದು ಬೆಳಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ ಅಲಂಕಾರ ಮಾಡಿ ಹೋಳಿ ನೆರವೇರಿಸಲಿದ್ದು ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಮಾಡಿ ರಾತ್ರಿ ತೊಟ್ಟಿಲು ಸೇವೆಯೊಂದಿಗೆ ಪಟಾಕಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ನಮ್ಮೂರ ಹನುಮೋತ್ಸವ: ಹನುಮಜಯಂತಿ ಆಚರಣೆಯ 9ನೇ ದಿನದ ಶನಿವಾರ ನಮ್ಮೂರ ಹನುಮೋತ್ಸವ ಅಂಗವಾಗಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ ದೇವಾಲಯದ ಆವರಣದಿಂದ ಹನುಮ ಉತ್ಸವ ಮೂರ್ತಿ ಮೆರವಣಿಗೆಗೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಶ್ರೀಗಳು ಚಾಲನೆ ನೀಡಲಿದ್ದು, ಆನಂತರ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತ ಸಮೂಹದೊಂದಿಗೆ ಶೋಭಾಯಾತ್ರೆಯ ಮೆರವಣಿಗೆ ಮಾಡಲಿದ್ದು, ಈ ಉತ್ಸವಕ್ಕೆ ಸರ್ವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್ ಜಾಧವ್, ಗೌರವಾಧ್ಯಕ್ಷ ಎಸ್. ಯೋಗಾನಂದ್, ವೇಣುಗೋಪಾಲ್, ಕಾರ್ಯದರ್ಶಿ ವಿನಯ್, ಪದಾಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್, ದರ್ಶನ್, ಅರುಣ್, ಪುನೀತ್, ಉಜ್ವಲ್, ಪುನೀತ್, ಧನುಷ್, ಪುಟ್ಟಸ್ವಾಮಿ, ನರಸಿಂಹರಾಜು, ಜಯರಾಂ ಇದ್ದರು.