ಸಿದ್ಧಾರೂಢರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ!

| Published : Dec 23 2024, 01:00 AM IST

ಸಿದ್ಧಾರೂಢರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ!
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಈಗಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿ ಇರುವ ಖಾಲಿ ಜಾಗೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ಆ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಗಾಂಧೀಜಿ ಪಾಲ್ಗೊಂಡಿದ್ದರು. ಸಿದ್ಧಾರೂಢ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಇದೀಗ ಶತಮಾನೋತ್ಸವ. ಆ ಅಧಿವೇಶನದ ಪೂರ್ವಭಾವಿ ಸಭೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದರು. ಅದರ ಅಧ್ಯಕ್ಷತೆಯನ್ನು ಇಲ್ಲಿನ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿ ವಹಿಸಿದ್ದರು ಎಂಬುದು ವಿಶೇಷ.

ಕಾಂಗ್ರೆಸ್‌ ಪಕ್ಷ ಆಗ ರಾಜಕೀಯ ಪಕ್ಷವಾಗಿರಲಿಲ್ಲ. ಅದು ಸ್ವಾತಂತ್ರ್ಯ ಹೋರಾಟಕ್ಕೆ ಹುಟ್ಟುಹಾಕಿದ್ದ ಸಂಘಟನೆಯಾಗಿತ್ತು. ಆಗ ದೇಶಭಕ್ತರನ್ನು ಒಂದುಗೂಡಿಸುವುದು. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸುವ ಕೆಲಸವನ್ನು ಗಾಂಧೀಜಿ ಕಾಂಗ್ರೆಸ್‌ ಮೂಲಕ ಮಾಡುತ್ತಿದ್ದರು. ದೇಶಾದ್ಯಂತ ಸುತ್ತುತ್ತಿದ್ದರು.

ಬೆಳಗಾವಿ ಅಧಿವೇಶನಕ್ಕೂ ಮುನ್ನ ಇಡೀ ದೇಶದಲ್ಲೇ ಸುತ್ತಾಡಿ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮಕ್ಕುವಂತೆ ಮಾಡುತ್ತಿದ್ದರು. ಅದೇ ರೀತಿ 1920ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿರಿ ಎಂಬ ಘೋಷಣೆ ಎಲ್ಲೆಡೆ ಮೊಳಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಗಾಧೀಜಿ ಬಂದಿದ್ದುಂಟು. ಆಗ ಇಲ್ಲೊಂದು ಸಮಾವೇಶ ಮಾಡುವ ಮೂಲಕ ಜನರನ್ನು ಒಗ್ಗೂಡಿಸಬೇಕು ಎಂಬ ಇಚ್ಛೆ ಅವರದ್ದಾಗಿತ್ತು.

ಅದರಂತೆ ಹುಬ್ಬಳ್ಳಿಯಲ್ಲಿ ಈಗಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿ ಇರುವ ಖಾಲಿ ಜಾಗೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ಆ ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಗಾಂಧೀಜಿ ಪಾಲ್ಗೊಂಡಿದ್ದರು. ಸಿದ್ಧಾರೂಢ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾರೂಢ ಸ್ವಾಮೀಜಿ ಆಗ ಬರೋಬ್ಬರಿ 45 ನಿಮಿಷಗಳಿಗೂ ಹೆಚ್ಚು ಸುದೀರ್ಘ ಕನ್ನಡ, ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದರಂತೆ. ಆ ಭಾಷಣ ಈ ಭಾಗದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿತ್ತು. ಜತೆಗೆ ಅಂದಿನ ಸಮಾವೇಶದಲ್ಲಿ ಗಾಂಧೀಜಿ ಅವರೇ ಸಿದ್ಧಾರೂಢರ ಕೊರಳಿಗೆ ಖಾದಿಯನ್ನು ತೊಡಿಸಿದ್ದರು ಎಂದು ಸಿದ್ಧಾರೂಢ ಮಠದ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರ ನೆನಪಿಸುತ್ತಾರೆ.

ಹೀಗೆ ಇಬ್ಬರು ಮೇರು ವ್ಯಕ್ತಿಗಳು ಪಾಲ್ಗೊಂಡ ಸಮಾವೇಶದ ಬಳಿಕ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮತ್ತಷ್ಟು ತೀವ್ರವಾಯಿತು. ಮುಂದೆ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈಗ ಕಾಂಗ್ರೆಸ್‌ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿದೆ. ಆದರೆ, ಆಗ ಸ್ವಾತಂತ್ರ ಹೋರಾಟಗಾರರನ್ನು ಹುರಿದುಂಬಿಸಲು ಹುಟ್ಟುಕೊಂಡಿದ್ದ ಕಾಂಗ್ರೆಸ್ಸಿನ ಬೆಳಗಾವಿ ಅಧಿವೇಶನಕ್ಕೆ ಹುಬ್ಬಳ್ಳಿ ಸ್ವಾತಂತ್ರ್ಯ ಹೋರಾಟದ ಸಮಾವೇಶವೂ ಕೊಡುಗೆ ನೀಡಿತ್ತು.

ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕರ್ನಾಟಕ ಅದರಲ್ಲೂ ಅಖಂಡ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಇವರೆಲ್ಲರನ್ನು ನಾವು ನೆನಪಿಸಿಕೊಳ್ಳಬೇಕಿದೆ. ಆ ಕೆಲಸ ಬೆಳಗಾವಿಯಲ್ಲಿ ನಡೆಯುತ್ತಿರುವ ಶತಮಾನೋತ್ಸವದ ಸಮಾವೇಶದಲ್ಲಿ ನಡೆಯಲಿದೆ. ಶತಮಾನೋತ್ಸವ ಸಮಾವೇಶ ಅತ್ಯಂತ ಯಶಸ್ವಿಯಾಗಲಿದೆ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹೇಳಿದ್ದಾರೆ.

25 ಸಾವಿರಕ್ಕೂ ಅಧಿಕ ಜನ ಭಾಗಿ: ಪಾಟೀಲ

ಬೆಳಗಾವಿಯಲ್ಲಿ 27ರಂದು ನಡೆಯಲಿರುವ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭದಲ್ಲಿ ಧಾರವಾಡ ಜಿಲ್ಲೆಯಿಂದ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದೇವೆ. ಇನ್ನು ಬೇರೆ ಬೇರೆ ರಾಜ್ಯಗಳಿಂದಲೂ ಅತಿಥಿಗಳು ಭಾಗವಹಿಸಲಿದ್ದಾರೆ. ಇಡೀ ರಾಜ್ಯದಿಂದ ಸರಿಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್‌ನ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ಪಾಟೀಲ ತಿಳಿಸುತ್ತಾರೆ.