ಮಾ. 3 ರಿಂದ 6ರವರೆಗೆ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನ

| Published : Feb 17 2024, 01:18 AM IST

ಸಾರಾಂಶ

51 ಜನವಸತಿ ಪ್ರದೇಶಗಳನ್ನು ಹೈ ರಿಸ್ಕ್ ಪ್ರದೇಶಗಳೆಂದು ಗುರುತಿಸಲಾಗಿದೆ. ಹುಣಸೂರು ಗ್ರಾಮಾಂತರ ಬಸ್‌ ನಿಲ್ದಾಣ ಮತ್ತು ಬಿಳಿಕೆರೆ ಬಸ್‌ ನಿಲ್ದಾಣಗಳಲ್ಲಿ ಮಾ.3 ರಿಂದ ಟ್ರಾನ್ಸಿಕ್ಟ್ ಬೂತ್‌ಗಳು ಮೂರು ದಿನಗಳ ಕಾಲ ಕಾರ್ಯ ನಿರ್ವಹಿಸಲಿವೆ. 832 ವ್ಯಾಕ್ಸಿನೇಟರ್ಸ್‌ಗಳು, 36 ಸೂಪರ್‌ ವೈಸರ್‌ ಗಳು ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸೂರು

ಈ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಮಾ. 3 ರಿಂದ 6ರವರೆಗೆ ಆಯೋಜನೆಗೊಂಡಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಈ ಕುರಿತು ಆಯೋಜಿಸಿದ್ದ ವಿವಿಧ ಇಲಾಖೆಗಳೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಈಗಾಗಲೇ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಮುಂಜಾಗ್ರತಾ ಕ್ರಮವಾಗಿ ಸರ್ಕಾರಗಳು ಕಳೆದ 7 ವರ್ಷಗಳಿಂದಲೂ ವಾರ್ಷಿಕ ಕನಿಷ್ಟ ಒಂದು ಅಭಿಯಾನವನ್ನಾದರೂ ಆಯೋಜಿಸುತ್ತಿವೆ. ತಾಲೂಕಿನಲ್ಲಿ 0 ಯಿಂದ 5ವರ್ಷದೊಳಗಿನ 18,288 ಮಕ್ಕಳಿದ್ದಾರೆ. ಅಭಿಯಾನದ ಯಶಸ್ಸಿಗಾಗಿ ತಾಲೂಕಿನಾದ್ಯಂತ 208 ಬೂತ್‌ ಗಳನ್ನು ರಚಿಸಲು ಸಿದ್ಧತೆ ನಡೆಸಿದೆ.

51 ಜನವಸತಿ ಪ್ರದೇಶಗಳನ್ನು ಹೈ ರಿಸ್ಕ್ ಪ್ರದೇಶಗಳೆಂದು ಗುರುತಿಸಲಾಗಿದೆ. ಹುಣಸೂರು ಗ್ರಾಮಾಂತರ ಬಸ್‌ ನಿಲ್ದಾಣ ಮತ್ತು ಬಿಳಿಕೆರೆ ಬಸ್‌ ನಿಲ್ದಾಣಗಳಲ್ಲಿ ಮಾ.3 ರಿಂದ ಟ್ರಾನ್ಸಿಕ್ಟ್ ಬೂತ್‌ಗಳು ಮೂರು ದಿನಗಳ ಕಾಲ ಕಾರ್ಯ ನಿರ್ವಹಿಸಲಿವೆ. 832 ವ್ಯಾಕ್ಸಿನೇಟರ್ಸ್‌ಗಳು, 36 ಸೂಪರ್‌ ವೈಸರ್‌ ಗಳು ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹುಣಸೂರು ಪಟ್ಟಣದಲ್ಲಿ ಮಾ. 6ರಂದು ಅಬಿಯಾನದ ನಡೆಯಲಿದ್ದು, 18 ಬೂತ್‌ ಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಮಕ್ಕಳ ಕುರಿತು ಹೆಚ್ಚಿನ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಹೊಂದಿರುತ್ತಾರೆ. ಹಾಗಾಗಿ ಈ ಬಾರಿಯ ಅಭಿಯಾನದಲ್ಲಿ ಅವರನ್ನು ಒಳಗೊಳ್ಳುವಂತೆ ಮನವಿ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ದೇಶನದಂತೆ ಅರಿವು ಜಾಥಾ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ಪೋಲಿಯೋ ದೇಶದಿಂದ ದೂರಾದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದು, ವಿವಿಧ ಇಲಾಖೆಗಳು ಸಹಯೋಗದೊಂದಿಗೆ ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕ ಸುಜೇಂದ್ರಕುಮಾರ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್‌ಕುಮಾರ್, ಎಸಿಡಿಪಿಒ ವೀಣಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಎಲ್‌.ಎಚ್‌.ವಿ ಪ್ರಮೀಳಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.