ಸಾರಾಂಶ
ಕೆಲವರು ಸಂವಿಧಾನದ ಆಶಯಗಳನ್ನು ತಿರುಚುವ, ಗಾಳಿಗೆ ತೂರುವ ಮಾತುಗಳನ್ನಾಡುತ್ತಿದ್ದು, ಅದರ ವಿರುದ್ಧವಾಗಿ ರಾಷ್ಟ್ರಮಟ್ಟದಲ್ಲಿ ಒಂದು ಸಂದೇಶ ಕೊಡುವ ನಿಟ್ಟಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ತಯಾರಿ ನಡೆದಿದೆ
ಎ.ಡಿ.ಈಶ್ವರಪ್ಪ ಮಾಹಿತಿ । ಕರಪತ್ರ ಬಿಡುಗಡೆ
ಹೊನ್ನಾಳಿ: ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲಿದೆ, ಆದರೆ ಕೆಲವರು ಸಂವಿಧಾನದ ಆಶಯಗಳನ್ನು ತಿರುಚುವ, ಗಾಳಿಗೆ ತೂರುವ ಮಾತುಗಳನ್ನಾಡುತ್ತಿದ್ದು, ಅದರ ವಿರುದ್ಧವಾಗಿ ರಾಷ್ಟ್ರಮಟ್ಟದಲ್ಲಿ ಒಂದು ಸಂದೇಶ ಕೊಡುವ ನಿಟ್ಟಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ತಯಾರಿ ನಡೆದಿದೆ ಎಂದು ಪ್ರಜಾಪರಿವರ್ತನಾ ವೇದಿಕೆಯ ರಾಜ್ಯ ಸಂಚಾಲಕ ಎ.ಡಿ.ಈಶ್ವರಪ್ಪ ಹೇಳಿದರು.ನಗರದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಕರ ಬೃಹತ್ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ರಾಷ್ಟ್ರಮಟ್ಟದಲ್ಲಿ ಮೇಧಾ ಪಾಟ್ಕರ್, ರೈತ ನಾಯಕ ಟಿಕಾಯತ್, ಕಲಾವಿದರಾದ ಪ್ರಕಾಶ್ ರೈ ಸೇರಿದಂತೆ ಇನ್ನೂ ಹಲವಾರು ನಾಯಕರು ಸೇರಿ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿವೆ ಎಂದು ಹೇಳಿದರು.ದಾವಣಗೆರೆಯಲ್ಲಿ ಈಗಾಗಲೇ ನಾಲ್ಕೈದು ಸಭೆಗಳು ನಡೆದಿದ್ದು, ಏಪ್ರಿಲ್ 26 ರಂದು ದಾವಣಗೆರೆಯ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅದರ ಸಂಬಂಧ ಕರಪತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಹೊನ್ನಾಳಿಯ ಗುರುಭವನದಲ್ಲಿ ಏ.12 ರಂದು ಬೆಳಿಗ್ಗೆ 11 ಗಂಟೆಗೆ ಮತ್ತೊಂದು ಸಭೆಯನ್ನು ಆಯೋಜಿಸಿದ್ದು ತಾಲೂಕಿನ ಎಲ್ಲಾ ಜಾತಿ, ಸಮುದಾಯಗಳ ಅಧ್ಯಕ್ಷರು, ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.ಬೃಹತ್ ಸಮಾವೇಶದ ಪ್ರಚಾರಕರ ತಂಡದ ಮುಖ್ಯಸ್ಥರಾದ ದಾವಣಗೆರೆಯ ಅನೀಸ್ ಪಾಷಾ, ಹೆಗ್ಗೆರೆ ರಂಗಣ್ಣ, ಬಿ.ತಿಪ್ಪಣ್ಣ, ನಿಜಾಮುದ್ದೀನ್, ಪವಿತ್ರ, ಉಷಾ ಕೈಲಾಸದ್, ಹೊನ್ನಾಳಿ ಮುಖಂಡರಾದ ಡಾ.ಈಶ್ವರನಾಯ್ಕ,ಉಮಾಪತಿ, ಕುರುವ ಮಂಜುನಾಥ್, ಸೂರಟೂರು ಹನುಮಂತಪ್ಪ, ಕುರುವ ಮಂಜು, ಸೇರಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.