ಸಾರಾಂಶ
ಮಂಡಳಿಯಿಂದ ಕೊಳಗೇರಿ ನಿವಾಸಿಗಳ ಸಮೀಕ್ಷೆ ಕಾರ್ಯಕೈಗೊಂಡು ಈ ವರೆಗೂ 68,415 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ.
ಹುಬ್ಬಳ್ಳಿ:
ಕೊಳಗೇರಿಯಲ್ಲಿ ಮನೆಗಳ ಹಕ್ಕುಪತ್ರ ವಿತರಣೆ ಪ್ರಕ್ರಿಯೆಯು ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಸರ್ಕಾರವು ನಿಗದಿ ಪಡಿಸಿರುವ ಕಾಲಮಿತಿಯೊಳಗೆ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬೆಂಗಳೂರಿನ ಸ್ಲಂ ಬೋರ್ಡ್‌ನ ಕೇಂದ್ರ ಕಚೇರಿಯಲ್ಲಿ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಮತ್ತು ಸ್ಧಳೀಯ ಸಂಸ್ಧೆಗಳ ಮಾಲಿಕತ್ವದಲ್ಲಿರುವ 1821 ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿರುವ 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಬಗ್ಗೆ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮಂಡಳಿಯಿಂದ ಕೊಳಗೇರಿ ನಿವಾಸಿಗಳ ಸಮೀಕ್ಷೆ ಕಾರ್ಯಕೈಗೊಂಡು ಈ ವರೆಗೂ 68,415 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಮಂಡಳಿ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ (ಸರ್ವರಿಗೂ ಸೂರು) ಯೋಜನೆಯ ಅಡಿ 1,80,253 ಮನೆ ನಿರ್ಮಾಣ ಕಾಮಗಾರಿ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ನಡೆಯುತ್ತಿದೆ. ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಪರಿಶೀಲಿಸಿ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬವಾದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಪೂರ್ಣಗೊಂಡಿರುವ 36,789 ಮನೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಜುಲೈ ಅಂತ್ಯದೊಳಗೆ 34,744 ಮನೆಗಳ ಕಾಮಗಾರಿ ಪೂರ್ಣಗೊಳಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಈ ಮನೆಗಳನ್ನು ಮುಖ್ಯಮಂತ್ರಿ ಅವರಿಂದ ಲೋಕಾರ್ಪಣೆ ಮಾಡಲಾಗುವುದು ಎಂದರು.ಸಭೆಯಲ್ಲಿ ಆಯುಕ್ತ ಡಾ. ಅಶೋಕ .ಡಿ.ಆರ್, ಮುಖ್ಯ ಎಂಜಿನಿಯರ್ ಎನ್.ಪಿ. ಬಾಲರಾಜು ಮತ್ತು ತಾಂತ್ರಿಕ ನಿರ್ದೇಶಕರು, ಮಂಡಳಿ ನಿರ್ದೇಶಕರು, ಸದಸ್ಯರು, ಹಿರಿಯ ಅಧಿಕಾರಿಗಳಿದ್ದರು.