ಮಾ.1ರಿಂದ ಪಿಯು ಪರೀಕ್ಷೆಗೆ ಜಿಲ್ಲೆಯಲ್ಲಿ ಸಿದ್ಧತೆ: ಜಿಲ್ಲಾಧಿಕಾರಿ ಡಾ.ವೆಂಕಟೇಶ

| Published : Feb 28 2024, 02:34 AM IST

ಸಾರಾಂಶ

ಜಿಲ್ಲಾದ್ಯಂತ ಒಟ್ಟು 33 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಎಲ್ಲಾ ಪೂರಕ ವಾತಾವರಣ ಕಲ್ಪಿಸಬೇಕು. ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಆಸನ, ಗಾಳಿ, ಬೆಳಕು, ಕುಡಿಯುವ ನೀರು ಸೇರಿ ಯಾವುದೇ ಸೌಕರ್ಯಗಳಿಗೆ ಕೊರತೆಯಾಗದಂತೆ ನಿಗಾ ವಹಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಮಾ.1ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡದೇ, ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಸುಸೂತ್ರ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾ.1ರಿಂದ 22ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರು, ಗಾಳಿ-ಬೆಳಕು ಹಾಗೂ ಆಸನದ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾದ್ಯಂತ ಒಟ್ಟು 33 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಎಲ್ಲಾ ಪೂರಕ ವಾತಾವರಣ ಕಲ್ಪಿಸಬೇಕು. ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಆಸನ, ಗಾಳಿ, ಬೆಳಕು, ಕುಡಿಯುವ ನೀರು ಸೇರಿ ಯಾವುದೇ ಸೌಕರ್ಯಗಳಿಗೆ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

ಪರೀಕ್ಷಾ ಕೇಂದ್ರದೊಳಗೆ ಕರ್ತವ್ಯ ನಿರತ ಸಿಬ್ಬಂದಿ ಹೊರತುಪಡಿಸಿ ಇತರೆ ಯಾರಿಗೂ ಪ್ರವೇಶವಿರಲ್ಲ. ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಈ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಲು ಅಗತ್ಯ ಕ್ರಮ, ಪರೀಕ್ಷೆಯಲ್ಲಿ ಯಾವುದೇ ಲೋಪದೋಷವಾಗದಂತೆ, ಪಾರದರ್ಶಕ ರೀತಿಯಲ್ಲಿ ನಡೆಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಶ್ನೆ ಪತ್ರಿಕೆ ವಿತರಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ:

ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ ಮಾತನಾಡಿ, ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸ್ವೀಕರಿಸಿ, ಅವುಗಳ ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮುಖ್ಯ ಅಧೀಕ್ಷಕರ ನೇಮಿಸಲಾಗುವುದು. ಕೇಂದ್ರದ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಸೇರಿ ವಿದ್ಯುನ್ಮಾನ ಉಪಕರಣ ತರುವುದು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್‌, ಶಾಲಾ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ರಾಜಶೇಖರ, ಡಯಟ್ ಉಪ ನಿರ್ದೇಶಕರಾದ ಗೀತಾ, ಖಜಾನೆ ಇಲಾಖೆ ಉಪ ನಿರ್ದೇಶಕಿ ಪ್ರಭಾವತಿ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾವತಿ, ಅಶ್ವತ್ಥ್ ಸೇರಿ ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು.

ಜಿಲ್ಲೆಯ 33 ಕೇಂದ್ರಗಳಲ್ಲಿ ಪರೀಕ್ಷೆ: ದಾವಣಗೆರೆ ತಾಲೂಕಿನ 18 ಕೇಂದ್ರಗಳು, ಹರಿಹರದ 4, ಜಗಳೂರಿನ 3, ಚನ್ನಗಿರಿಯ 5, ಹೊನ್ನಾಳಿಯ 3 ಕೇಂದ್ರ ಸೇರಿ ಒಟ್ಟು 33 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 21,088 ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಹೊಸ ವಿದ್ಯಾರ್ಥಿಗಳು 19644, ಪುನರಾವರ್ತಿತ ವಿದ್ಯಾರ್ಥಿಗಳು 422 ಮಂದಿ ಇದ್ದಾರೆ. ಖಾಸಗಿ ವಿದ್ಯಾರ್ಥಿಗಳು 1022 ಇದ್ದು, ಒಟ್ಟಾರೆ 9,980 ಗಂಡು, 11,108 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ತಿಳಿಸಿದರು.

ಹರಿಹರ ಬಿಇಒಗೆ ನೋಟಿಸ್‌ ಜಾರಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಸಭೆಗೆ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಈ ಸಭೆಗೆ ಗೈರು ಆಗಿದ್ದಾರೆ. ತಕ್ಷಣವೇ ಹರಿಹರ ಬಿಇಒಗೆ ನೋಟಿಸ್ ಜಾರಿಗೊಳಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಬಳ್ಳಾರಿ ಆದೇಶಿಸಿದರು.