ಪಾರದರ್ಶಕ ಚುನಾವಣೆಗಾಗಿ ಪೂರ್ವತಯಾರಿ ಅಗತ್ಯ: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌

| Published : Mar 22 2024, 01:06 AM IST

ಪಾರದರ್ಶಕ ಚುನಾವಣೆಗಾಗಿ ಪೂರ್ವತಯಾರಿ ಅಗತ್ಯ: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗಾಗಿ ಪೂರ್ವ ತಯಾರಿ ಅಗತ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಸೆಕ್ಟರ್ ಅಧಿಕಾರಿಗಳಿಗೆ ತಿಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗಾಗಿ ಪೂರ್ವ ತಯಾರಿ ಅಗತ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಸೆಕ್ಟರ್ ಅಧಿಕಾರಿಗಳ ಕರ್ತವ್ಯ ಹಾಗೂ ವಿದ್ಯುನ್ಮಾನ ಮತ ಯಂತ್ರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿ ಸೆಕ್ಟರ್ ಅಧಿಕಾರಿಗಳು ೧೦ ರಿಂದ ೧೨ ಮತಗಟ್ಟೆಗಳ ಜವಾಬ್ದಾರಿಯನ್ನು ಹೊಂದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ನೇಮಕವಾದ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಉಸ್ತುವಾರಿ, ಭೀತಿ-ತಡೆ ನಕಾಶೆ ತಯಾರಿ, ಚುನಾವಣಾ ನಿರ್ವಹಣೆ, ಜಿಲ್ಲಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿ ಮಾಡುವುದು ಸೇರಿದಂತೆ ಮತಗಟ್ಟೆಗಳು, ಮತಗಟ್ಟೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಬಿಎಲ್‌ಓ, ಚುನಾವಣಾ ನೋಂದಣಿ ಅಧಿಕಾರಿಗಳು(ಇಆರ್‌ಓ) ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಬೇಕು ಎಂದು ತಿಳಿಸಿದರು.

ಸೆಕ್ಟರ್ ಅಧಿಕಾರಿಗಳು ತಮಗೆ ಹಂಚಿಕೆಯಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಮತ ಯಂತ್ರದ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಬೇಕು. ಭಯ ಮುಕ್ತ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಭಯಭೀತ ಪ್ರದೇಶ ಮತ್ತು ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು. ಭಯಭೀತ ಪ್ರದೇಶಗಳಿಗೆ ಪದೇ-ಪದೇ ಭೇಟಿ ನೀಡಿ ಜನರಲ್ಲಿರುವ ಭಯವನ್ನು ಹೋಗಲಾಡಿಸಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕೆಂದರು. ಚುನಾವಣಾ ಕೈಪಿಡಿಯಲ್ಲಿ ಸೆಕ್ಟರ್ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಇರುವ ಮಾಹಿತಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಇದರಿಂದ ಸುಲಭವಾಗಿ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಚುನಾವಣಾ ಆಯೋಗವು ಈ ಬಾರಿ 85 ವರ್ಷ ಮೇಲ್ಪಟ್ಟ ಹಾಗೂ ಶೇ.40 ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಗೊಂದಲಕ್ಕೀಡಾಗದೆ ಅರ್ಹರಿಗೆ ಮಾತ್ರ ಮನೆಯಿಂದ ಮತದಾನ ಮಾಡಲು ನಮೂನೆ ೧೨ಡಿಯನ್ನು ವಿತರಿಸುವ ಬಗ್ಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ಮತದಾನ ದಿನದಂದು ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ನೈಜ ಮತದಾನಕ್ಕೂ ಮುನ್ನ ಕಡ್ಡಾಯ ವಾಗಿ ಅಣಕು ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿ ಪ್ಯಾಟ್‌ಗಳು ಕಾರ್ಯ ನಿರ್ವಹಿಸದಿದ್ದಲ್ಲಿ ಸಂಬಂಧಿಸಿದ ಯೂನಿಟ್‌ ಅನ್ನು ಮಾತ್ರ ಬದಲಾಯಿಸಲು ಕ್ರಮ ಕೈಗೊಂಡು ನಿಗದಿತ ನಮೂನೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ವರದಿ ನೀಡಬೇಕು ಎಂದು ಎಲ್ಲಾ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.

ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ರಿಜ್ವಾನ್ ಪಾಷಾ ಚುನಾವಣೆ ಪೂರ್ವ, ಮತದಾನ ದಿನ ಹಾಗೂ ಮತದಾನದ ನಂತರ ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಿದರು. ಮತ್ತೊಬ್ಬ ಮಾಸ್ಟರ್ ಟ್ರೈನರ್ ಜಿ.ವಿ.ಗೋಪಾಲ್ ಅಣಕು ಮತದಾನ, ನೈಜ ಮತದಾನ, ವಿದ್ಯುನ್ಮಾನ ಮತಯಂತ್ರ ಉಪಯೋಗಿಸುವ ವಿಧಾನದ ಬಗ್ಗೆ ವಿಡಿಯೋ ಪ್ರದರ್ಶನದ ಮೂಲಕ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಉಪವಿಭಾ ಗಾಧಿಕಾರಿಗಳಾದ ಸಪ್ತಶ್ರೀ, ಗೌರವ್‌ಕುಮಾರ್ ಶೆಟ್ಟಿ, ಶಿವಪ್ಪ ಗೋಟೂರು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು. --------------------------

ಸೆಕ್ಟರ್ ಅಧಿಕಾರಿಗಳು ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಒಂದು ಚುನಾವಣೆಗಿಂತ ಮತ್ತೊಂದು ಚುನಾವಣೆಯು ಭಿನ್ನವಾಗಿರುತ್ತದೆ ಎಂಬುದನ್ನು ತಿಳಿಯಬೇಕು. ಚುನಾವಣೆ ಯಶಸ್ವಿಯಾಗಬೇಕಾದರೆ ಸೆಕ್ಟರ್ ಅಧಿಕಾರಿಗಳ ಪಾತ್ರ ಪ್ರಮುಖವಾದುದು. ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳು ಎಲ್ಲೆಲ್ಲಿ ಇವೆ ಹಾಗೂ ಯಾವ ಮಾರ್ಗದಿಂದ ಮತಗಟ್ಟೆಗೆ ಕ್ಷಿಪ್ರವಾಗಿ ಸಂಚರಿಸಬಹುದು ಎಂಬುದನ್ನು ಗುರುತಿಸಬೇಕು. ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯವಿರುವುದನ್ನು ಗಮನಿಸಿ ವರದಿ ಮಾಡಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಕೂಡಲೇ ಚುನಾವಣಾಧಿಕಾರಿಗಳಿಗೆ ವರದಿ ಮಾಡಬೇಕು.

- ಶುಭಾ ಕಲ್ಯಾಣ್‌, ಜಿಲ್ಲಾಧಿಕಾರಿ