ಇಂದು ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ಕರಾವಳಿಯಲ್ಲಿ ಸಿದ್ಧತೆ

| Published : Jan 22 2024, 02:20 AM IST

ಇಂದು ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ಕರಾವಳಿಯಲ್ಲಿ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿಯ ಭಜನಾ ಮಂದಿರ, ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಂಘಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ರಾಮನ ಪ್ರಾಣಪ್ರತಿಷ್ಠೆ ಹಾಗೂ ಲೋಕಾರ್ಪಣೆಯ ನೇರ ಪ್ರಸಾರಕ್ಕೆ ಎಲ್‌ಇಡಿ ಮೂಲಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ,

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಹಾಗೂ ಲೋಕಾರ್ಪಣೆಯ ಸಂಭ್ರಮದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕರಾವಳಿಯಾದ್ಯಂತ ಸಕಲ ಸಿದ್ಧತೆ ಮಾಡಲಾಗಿದೆ. ಕರಾವಳಿಯ ಭಜನಾ ಮಂದಿರ, ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಂಘಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ರಾಮನ ಪ್ರಾಣಪ್ರತಿಷ್ಠೆ ಹಾಗೂ ಲೋಕಾರ್ಪಣೆಯ ನೇರ ಪ್ರಸಾರಕ್ಕೆ ಎಲ್‌ಇಡಿ ಮೂಲಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಪೂಜೆ, ರಾಮತಾರಕ ಯಜ್ಞ, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಯಲಿದೆ. ಸಿಹಿ ವಿತರಣೆ, ಮಧ್ಯಾಹ್ನ ಅನ್ನದಾಸೋಹ ಕೂಡ ಏರ್ಪಡಲಿದೆ. ಎಲ್ಲೆಲ್ಲೂ ಕೇಸರಿ ಅಲಂಕಾರ: ರಾಮನ ಪ್ರಾಣ ಪ್ರತಿಷ್ಠೆ ಸಲುವಾಗಿ ಕರಾವಳಿಯಲ್ಲಿ ಈಗಾಗಲೇ ಕೇಸರಿ ಧ್ವಜ ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಪ್ರಮುಖ ರಸ್ತೆಗಳ ಅಲ್ಲಲ್ಲಿ ಶ್ರೀರಾಮನ ಕಟೌಟ್‌, ಶುಭ ಕೋರುವ ಬ್ಯಾನರ್‌ಗಳು, ಪ್ರವೇಶ ದ್ವಾರಗಳು, ಪತಾಕೆಗಳು ರರಾಜಿಸುತ್ತಿವೆ. ಬಸ್‌, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದೆ.ಎಲ್ಲವೂ ರಾಮನ ಬಗ್ಗೆ: ಕರಾವಳಿಯ ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಾಮನ ಪ್ರಾಣ ಪ್ರತಿಷ್ಠೆ ಸಲುವಾಗಿ ಸೋಮವಾರ ರಜೆ ಸಾರಲಾಗಿದೆ. ಆದರೆ ಸರ್ಕಾರಿ ಶಾಲಾ ಕಾಲೇಜುಗಳು ಸರ್ಕಾರ ನೀಡಿದರೆ ಮಾತ್ರ ರಜೆ ಸಾರಲಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಹಿಂದು ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

ಖಾಸಗಿ ಶಾಲಾ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ಟಿವಿ ಮೂಲಕ ನೇರ ಪ್ರಸಾರ ವೀಕ್ಷಣೆ ಏರ್ಪಡಿಸಲಾಗಿದ್ದು, ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ವೇಷಭೂಷಣ ಸ್ಪರ್ಧೆ, ರಾಮಾಯಣಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜ.22ರಂದು ರಜೆ ಘೋಷಿಸಿವೆ.ಮಂಗಳೂರು ನಗರದ 196 ಕಡೆಯ ದೇವಸ್ಥಾನ ಹಾಗೂ ಮಂದಿರಗಳಲ್ಲಿ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮದ್ಯ ಬಂದ್‌: ಮಂಗಳೂರು ನಗರದಾದ್ಯಂತ ಪೊಲೀಸ್‌ ಬಿಗು ಬಂದೋಬಸ್ತ್‌ ಕೈಗೊಳ್ಳಲಾಗಿದೆ. ದ.ಕ.ಜಿಲ್ಲೆಯಾದ್ಯಂತ ಜ.21ರ ಮಧ್ಯರಾತ್ರಿಯಿಂದ ಜ.23ರ ಮುಂಜಾನೆ ವರೆಗೆ ಎಲ್ಲ ರೀತಿಯ ಬಾರ್‌, ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮೆರವಣಿಗೆಯನ್ನು ನಿರ್ಬಂಧಿಸಲಾಗಿದ್ದು, ಪ್ರಾಣ ಪ್ರತಿಷ್ಠಾ ಸಡಗರವನ್ನು ದೇವಸ್ಥಾನ ಮತ್ತು ಮನೆಯಲ್ಲೇ ಕುಳಿತು ವೀಕ್ಷಿಸುವಂತೆ ಹಿಂದು ಸಂಘಟನೆಗಳು ಮನವಿ ಮಾಡಿವೆ. ಮನಸೂರೆಗೊಂಡ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ

ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ಸಲುವಾಗಿ ಕರಾವಳಿಯಲ್ಲಿ ಯಕ್ಷಗಾನ ಮೇಳಗಳ‍ು ಶ್ರೀರಾಮನ ಕಥಾನಕ ಪ್ರದರ್ಶನಿಸುತ್ತಿವೆ. ಈ ಮೂಲಕ ಅಯೋಧ್ಯೆ ಮಂದಿರ ಲೋಕಾರ್ಪಣೆಯ ಸಡಗರಲ್ಲಿ ಭಾಗಿಯಾಗುತ್ತಿವೆ.

ತೆಂಕು ಹಾಗೂ ಬಡಗು ತಿಟ್ಟಿನ ಕೆಲವು ಯಕ್ಷಗಾನ ಮೇಳಗಳು ಈಗಾಗಲೇ ರಾಮನ ಕುರಿತ ಪ್ರಸಂಗ ಪ್ರದರ್ಶಿಸುತ್ತಿದ್ದರೆ, ಪ್ರಸಂಗ ಮುಕ್ತಾಯದಲ್ಲಿ ಶ್ರೀರಾಮ ಸ್ತುತಿಯ ಮೂಲಕ ಆರತಿ ಬೆಳಗಿ ಮಂಗಲ ಹಾಡುತ್ತಿದ್ದಾರೆ. ತೆಂಕಿ ತಿಟ್ಟಿನ ಪ್ರಸಿದ್ಧ ಶ್ರೀಧರ್ಮಸ್ಥಳ ಮೇಳ ಶನಿವಾರದಿಂದ ನಾಲ್ಕು ದಿನಗಳ ಕಾಲ ಶ್ರೀರಾಮನ ಕುರಿತ ಯಕ್ಷಗಾನ ಪ್ರದರ್ಶಿಸುತ್ತಿದೆ. ಮಾತ್ರವಲ್ಲ ಪ್ರಸಂಗದ ಕೊನೆಗೆ ಶ್ರೀರಾಮ ಪಟ್ಟಾಭಿಷೇಕವನ್ನು ವಿಶೇಷವಾಗಿ ಪ್ರದರ್ಶಿಸುತ್ತಿದೆ. ಶನಿವಾರ ಉಡುಪಿಯ ಗುಜ್ಜಾಡಿಯಲ್ಲಿ ನಡೆದ ‘ಕಾರುಣ್ಯಾಂಬುಧಿ ಶ್ರೀರಾಮ’ ಯಕ್ಷಗಾನದಲ್ಲಿ ಶ್ರೀರಾಮ ಪಟ್ಟಾಭಿಷೇಕ ವಿಶೇಷವಾಗಿ ಪ್ರದರ್ಶನಗೊಂಡು ಮನಸೂರೆಗೊಂಡಿದೆ.

ಇಂದು ಶಾಲೆಗೆ ರಜೆ ನೀಡಲು ಆಗ್ರಹ

ತಾನು ರಾಮ ಭಕ್ತನೆಂದು ಹೇಳುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರಂದು ಶಾಲಾ ಕಾಲೇಜುಗಳಿಗೆ ರಜೆ ನೀಡುವ ಮೂಲಕ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತ ಸಂಭ್ರಮ,ಪೂಜೆ ಆಚರಿಸಲು ಅವಕಾಶ ನೀಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.ಇದು ಬಹುಸಂಖ್ಯಾತ ಜನರ ಮನಸ್ಸಿಗೆ ಘಾಸಿ ಉಂಟು ಮಾಡುತ್ತಿದೆ. ಇಡೀ ದೇಶದಲ್ಲಿ ಹಬ್ಬದ ಸಂಭ್ರಮವಿದೆ. ಮನೆ ಮನೆಯಲ್ಲೂ ದೀಪಾವಳಿ ಅಚರಣೆಗೆ ತಯಾರಿ ನಡೆದಿದೆ. ಶಿಕ್ಷಣ ಇಲಾಖೆ ಮಾತ್ರ ಈ ಸಂಭ್ರಮದಲ್ಲಿ ಮಕ್ಕಳು ಭಾಗವಹಿಸದಂತೆ ರಜೆ ಸಾರದೆ ಪರೋಕ್ಷವಾಗಿ ತಡೆ ಒಡ್ಡಿದೆ. ಆದ್ದರಿಂದ ಸರ್ಕಾರ ರಜೆ ನೀಡುವ ಬಗ್ಗೆ ಮರು ಚಿಂತನೆ ನಡೆಸಬೇಕು ಎಂದು ಡಾ.ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಇಂದು ಕುಟುಂಬ ಸಮೇತ ಸಂಭ್ರಮಿಸಿಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಸೋಮವಾರ ರಾಮನ ಪ್ರಾಣಪ್ರತಿಷ್ಠೆ ಮಹೋತ್ಸವದ ನಡೆಯಲಿದ್ದು ಇಡೀ ದೇಶದ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಎಲ್ಲ ಹಿಂದೂಗಳು ಕುಟುಂಬ ಸಮೇತ ತಮ್ಮ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಧಾರ್ಮಿಕ ಪೂಜಾ ವಿಧಿವಿಧಾನಗಳ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕರೆ ನೀಡಿದರು.

ಈ ಅಪೂರ್ವ ಐತಿಹಾಸಿಕ ಕ್ಷಣಕ್ಕೆ ಪ್ರತಿಯೊಬ್ಬ ದೇಶವಾಸಿಯೂ ಸಾಕ್ಷಿಯಾಗಲು ಕೇಂದ್ರ ಸರ್ಕಾರ ಸಹಿತ ದೇಶದ ಬಹುತೇಕ ರಾಜ್ಯಗಳು ಸಾರ್ವಜನಿಕ ರಜೆಯನ್ನು ಘೋಷಿಸಿವೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಎಂದಿನ ಹಿಂದೂ ವಿರೋಧಿ ನೀತಿ ಪ್ರದರ್ಶಿಸಿ ರಜೆ ಘೋಷಿಸದೇ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿದೆ. ಆದರೂ ಸಹ ಹಲವು ಶತಮಾನಗಳ ಕನಸು ಸಾಕಾರಗೊಳ್ಳುವ ಈ ಐತಿಹಾಸಿಕ ದಿನದಂದು ಸಮಸ್ತ ರಾಮಭಕ್ತರು ಕುಟುಂಬ ಸಮೇತ ಪಾಲ್ಗೊಂಡು ಸಂಭ್ರಮಿಸುವಂತೆ ಶಾಸಕರು ಮನವಿ ಮಾಡಿದರು.