ಸಾರಾಂಶ
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ಜರುಗಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಜಾತ್ರೆಗೆ ಬರುವವರನ್ನು ಸ್ವಾಗತಿಸಲು ಪ್ಲೆಕ್ಸ್ ರಾರಾಜಿಸುತ್ತಿವೆ. ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಗ್ಗೆ ರುದ್ರಾಭಿಷೇಕ ಜರುಗುತ್ತಿದೆ. ಈಗಾಗಲೇ ಪ್ರತಿದಿನ ಸಂಜೆ ೬.೩೦ ಗಂಟೆಗೆ ಬಳೂಟಗಿಯ ಶಿವಕುಮಾರ ಸ್ವಾಮೀಜಿಯವರಿಂದ ಬಸವಾದಿ ಪ್ರಮಥರ ವಚನ ಕೂಡ ಶುರವಾಗಿದೆ.
ಬಸವೇಶ್ವರರ ಜನ್ಮಸ್ಥಳಕ್ಕೆ ಜಿಲ್ಲಾ ಕೇಂದ್ರ ವಿಜಯಪುರ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ, ಕೊಲ್ಹಾರ, ದೇವರಹಿಪ್ಪರಗಿ ಮಾರ್ಗವಾಗಿ ಜನರು ಬರಲಿದ್ದಾರೆ. ಮಾತ್ರವಲ್ಲ, ಬಾಗಲಕೋಟೆ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ವರ್ಷ ಸರ್ಕಾರ ಶಕ್ತಿ ಯೋಜನೆ ಜಾರಿಗೆ ಗೊಳಿಸಿದ್ದರಿಂದ ದೇವಸ್ಥಾನಕ್ಕೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು. ಬಂದ ಭಕ್ತರಿಗೆ ಉಳಿದುಕೊಳ್ಳಲು, ಸ್ನಾನ-ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕಿದೆ. ಜಾತ್ರೆಗೆ ಎರಡು ದಿನಗಳು ಬಾಕಿ ಇರುವುದರಿಂದ ದೇವಸ್ಥಾನಕ್ಕೆ, ದ್ವಾರಬಾಗಿಲು, ಕಟ್ಟಡಕ್ಕೆ ವಿದ್ಯುದ್ದೀಪ ಅಲಂಕಾರ ಮಾಡಲಾಗಿದೆ. ಬಸವೇಶ್ವರ ವೃತ್ತವನ್ನು ಸಹ ದುರಸ್ತಿಗೊಳಿಸಿ ಕಂಗೊಳಿಸುತ್ತಿದೆ.ಬಾಕ್ಸ್..
ಸಿದ್ಧರಾಗಿದ್ದಾರೆ ವ್ಯಾಪಾರಸ್ಥರು:ದೇವಾಲಯದ ಅಂತಾರಾಷ್ಟ್ರೀಯ ಶಾಲೆಯ ಪಕ್ಕದಲ್ಲಿರುವ ಅನಿಲ ಅಗರವಾಲ ಅವರ ಜಮೀನಿನಲ್ಲಿ ಬಳೆ, ಸ್ಟೇಶನರಿ, ಗೊಂಬೆ, ವಿವಿಧ ಮಳಿಗೆಗಳು, ತೂಗುತೊಟ್ಟಿಲು ಸೇರಿದಂತೆ ಜಾತ್ರೆಯ ಎಲ್ಲ ಮಳಿಗೆಗಳು ಬಂದು ನೆಲೆಸಿವೆ. ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಉತ್ಸವ ಸಮಿತಿ ಪದಾಧಿಕಾರಿಗಳು ಮಳಿಗೆ ಹಾಕುವವರಿಗೆ ಹಂಚಿಕೆ ಮಾಡಿದ್ದಾರೆ. ಮಳಿಗೆಗಳನ್ನು ಹಾಕಲು ಸ್ಥಳೀಯ ವ್ಯಾಪಾರಸ್ಥರು ಸೇರಿದಂತೆ ಜಿಲ್ಲೆ, ವಿವಿಧ ಜಿಲ್ಲೆ, ಆಂಧ್ರಪ್ರದೇಶ, ಬಾಂಬೆ, ಉತ್ತರಪ್ರದೇಶ, ದೆಹಲಿ ಸೇರಿದಂತೆ ವಿವಿಧೆಡೆ ವ್ಯಾಪಾರಸ್ಥರು ಬಂದಿದ್ದಾರೆ.
ಮಳಿಗೆಗಳಿಗೆ ಜನರು ಬರಲು ವಿವಿಧೆಡೆ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಮೀನಿನಲ್ಲಿ ಗರಸು ಹಾಕಿ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಮಳೆ ಬಂದರೂ ರಾಡಿಯಾಗುವ ಪ್ರಮೇಯವೇ ಇರುವುದಿಲ್ಲ. ಬೇರೆಡೆಯಿಂದ ಬರುವ ಭಕ್ತರು ದೇವಸ್ಥಾನದಲ್ಲಿರುವ ಕೋಣೆಗಳಲ್ಲಿ ಉಳಿದುಕೊಳ್ಳಬಹುದು. ಇಲ್ಲವೇ ಇರುವ ಒಂದು ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಳ್ಳಬಹುದು. ದೇವಸ್ಥಾನದಲ್ಲಿ ಉಳಿದುಕೊಂಡ ಭಕ್ತರು ಸ್ನಾನ, ಶೌಚಾಲಯಕ್ಕಾಗಿ ದೇವಸ್ಥಾನದ ಹೊರಗೆ ಇರುವ ಶೌಚಾಲಯಗಳಿಗೆ ಹೋಗಬೇಕು. ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಮಹಿಳೆಯರ ಸ್ನಾನಕ್ಕೆ ದಾಸೋಹದ ಪಕ್ಕದಲ್ಲಿ ವ್ಯವಸ್ಥೆ ಮಾಡಿದೆ.-------------ಜಾತ್ರಾ ಕಾರ್ಯಕ್ರಮಗಳು ಏನೇನಿವೆ?
ಆ.೨೬ ರಂದು ಬೆಳಗ್ಗೆ ೮.೩೦ ಗಂಟೆಗೆ ದೇವಸ್ಥಾನದಿಂದ ಸಕಲ ವಾದ್ಯಮೇಳದೊಂದಿಗೆ ವಿರಕ್ತಮಠಕ್ಕೆ ತೆರಳಿ ಮುರುಘೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿಯವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡ ನಂತರ ಸರ್ವ ಅಲಂಕೃತ ಉತ್ಸವ ನಂದಿ ಮೂರ್ತಿಯನ್ನು ಹೊತ್ತ ಬೆಳ್ಳಿಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆ ಮೂಲಕ ಹೊರಟು ಇತಿಹಾಸ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ದರ್ಶನ ನೀಡಿದ ನಂತರ ಅಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಂದ ಈ ವರ್ಷದ ನುಡಿ-ಹೇಳಿಕೆಗಳು ಜರುಗುತ್ತವೆ. ನಂತರ ಬಸವನಹಟ್ಟಿ, ಬುತ್ತಿ ಬಸವಣ್ಣ ಗುಡಿಗೆ ತೆರಳಿದ ನಂತರ ಸಂಜೆ ೭ ಗಂಟೆಗೆ ಪಟ್ಟಣದ ಕಂಬಿ ಕಟ್ಟಿಗೆ ಪಲ್ಲಕ್ಕಿ ಉತ್ಸವ ಆಗಮಿಸುತ್ತದೆ. ಪಲ್ಲಕ್ಕಿ ಉತ್ಸವವನ್ನು ಸಕಲವಾದ್ಯ, ಆನೆಅಂಬಾರಿ ವೈಭವದೊಂದಿಗೆ ಬರಮಾಡಿಕೊಂಡ ನಂತರ ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಬರಮಾಡಿಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ದೇವಾಲಯದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಮನಮೋಹಕ ಸಿಡಿಮದ್ದು ಸುಡಲಾಗುವುದು. ರಾತ್ರಿ ೧೦ ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.- ಆ.೨೭ ರಂದು ಜಾತ್ರೆಯಂಗವಾಗಿ ಬೆಳಗ್ಗೆ ೯ ಗಂಟೆಯಿಂದ ಪ್ರಸಿದ್ಧ ಗೀಗೀ, ಚೌಡಕಿ, ಡೊಳ್ಳು, ಭಜನಾ ಪದಗಳು ಸುಪ್ರಸಿದ್ಧ ಕಲಾವಿದರಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ. ಮಧ್ಯಾಹ್ನ ೩ ಗಂಟೆಗೆ ಗುರುಕೃಪಾ ಪ್ರಾಥಮಿಕ ಶಾಲೆಯ ಹತ್ತಿರ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ ೧೦.೩೦ ಗಂಟೆಗೆ ಸ್ಥಳೀಯ ಬಸವೇಶ್ವರ ಬೈಲಾಟ ಸಂಘದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರದಾನ ನಾಟಕ ಪ್ರದರ್ಶನವಾಗಲಿದೆ.
- ಆ.೨೮ ರಂದು ಬೆಳಗ್ಗೆ ೯ ಗಂಟೆಯಿಂದ ದೇವಾಲಯದ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆ, ಮಧ್ಯಾನ್ಹ ೩ ಗಂಟೆಗೆ ನಿರ್ಣಾಯಕ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ ೧೦.೩೦ ಗಂಟೆಗೆ ಮಹಾಲಿಂಗಪೂರದ ಮಹಾಋಷಿ ಭಗೀರಥ ಕೃಪಾಪೋಷಿತ ಕಲಾ ನಾಟ್ಯ ಸಂಘದಿಂದ ಮಾನವಂತರ ಮನೆತನ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.-ಆ.೨೯ ರಂದು ದೇವಾಲಯದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಜಾತ್ರೆಯಂಗವಾಗಿ ಎರಡು ದಿನಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಉದ್ಘಾಟನೆ ನೆರವೇರಲಿದೆ. ಸಂಜೆ ೬.೩೦ ಗಂಟೆಗೆ ಕರ್ನಾಟಕ ಚಲನಚಿತ್ರ ಹಾಸ್ಯ ನಟರ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
- ಆ.೩೦ ರಂದು ಸಂಜೆ ೭ ಗಂಟೆಗೆ ಝಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರ ಅವರ ನೇತೃತ್ವದಲ್ಲಿ ಕಲಾ ಸಿಂಚನ ಮೆಲೋಡಿಸ್ ತಂಡದಿಂದ ಜಾನಪದ ಸಂಜೆ ಕಾರ್ಯಕ್ರಮ ಜರುಗಲಿದೆ.----
ದೇವಸ್ಥಾನದ ಪಕ್ಕದಲ್ಲಿರುವ ಅಕ್ಕನಾಗಮ್ಮ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಪ್ರತಿನಿತ್ಯ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಂಪ್ರದಾಯದಂತೆ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.-ಬಸಪ್ಪ ಪೂಜಾರಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರು.
--ವಾಹನ ಸಂಚಾರ ಸುಗಮವಾಗಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಜಾತ್ರೆಗೆ ವಾಹನಗಳನ್ನು ತೆಗೆದುಕೊಂಡು ಬರುವ ಭಕ್ತರು ಆದಷ್ಟು ಪಟ್ಟಣದ ಹೊರವಲಯದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು. ಯಾವುದೇ ಕಾರಣಕ್ಕೂ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪಾರ್ಕ್ ಮಾಡಬಾರದು. ಒಂದು ವೇಳೆ ಪಾರ್ಕ್ ಮಾಡಿದರೆ ವಾಹನ ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸುಗಮ ಸಂಚಾರಕ್ಕೆ ಜನರು ಸಹಕಾರ ನೀಡಬೇಕು. ಶಾಂತಿ ಸುವ್ಯವಸ್ಥೆಗೆ ನಮ್ಮ ಸಿಬ್ಬಂದಿಯನ್ನು ನಿಯೋಜಿಲಾಗುತ್ತದೆ.
-ಬಲ್ಲಪ್ಪ ನಂದಗಾವಿ, ಡಿವೈಎಸ್ಪಿ.--
ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ನಡೆಯಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರಥಮ ಬಾರಿಗೆ ರೈತರಿಗೆ ನೆರವಾಗುವ ಉದ್ದೇಶದಿಂದ ಎರಡು ದಿನಗಳ ಕಾಲ ಕೃಷಿಮೇಳ ಆಯೋಜಿಸಲಾಗಿದೆ. ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಎಲ್ಲರೂ ಸಹಾಯ, ಸಹಕಾರ ನೀಡಬೇಕು.-ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರು.
--ಸ್ಥಳೀಯ ಪೂಜ್ಯರ ಹಾಗೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಈ ವರ್ಷದ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಎರಡು ದಿನಗಳ ಕಾಲ ಕೃಷಿಮೇಳ ಆಯೋಜಿಸುವ ಮೂಲಕ ರೈತ ಬಾಂಧವರಿಗೆ ಅನುಕೂಲ ಮಾಡಿಕೊಡಲಾಗಿದೆ. ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡೋಣ.
-ಗುರುಲಿಂಗ ಬಸರಕೋಡ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು.