ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕಿತ್ತೂರು ಚನ್ನಮ್ಮಳ 200ನೇ ವಿಜಯೋತ್ಸವ ವರ್ಷಾಚರಣೆ ನಿಮಿತ್ತ ಅ.28ರಂದು ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಪ್ರಥಮ ವಿಜಯೋತ್ಸವಕ್ಕೆ ನಗರದಲ್ಲಿ ಭರದ ಸಿದ್ಧತೆ ನಡೆದಿದೆ.ಬೈಲಹೊಂಗಲ ಜನತೆಯ ಆಶಯದಂತೆ ವಿಜಯೋತ್ಸವ ಆಚರಣೆಗೆ ಭವ್ಯವಾದ ಪೆಂಡಾಲ್ ನಿರ್ಮಿಸುವ ಮೂಲಕ ಮಹಾಮಾತೆಯ ಶೌರ್ಯ ಸಾಹಸಗಾಥೆಗೆ ನಮನ ಸಲ್ಲಿಸುವ ಕಾರ್ಯ ಜರುಗಲಿದೆ.
ಚನ್ನಮ್ಮ ಸ್ಮರಣೋತ್ಸವ ಸಮಿತಿ ಒತ್ತಾಯಕ್ಕೆ ಮಣಿದು ನಡೆಯುತ್ತಿರುವ ಈ ಸಮಾರಂಭ ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ.200 ಅಡಿ ಉದ್ದ, 80 ಅಡಿ ಅಗಲ ಅಳತೆಯಲ್ಲಿ ಪೆಂಡಾಲ್ ಹಾಕಲಾಗುತ್ತಿದ್ದು, ವಿದ್ಯುತ್ ದೀಪಾಲಂಕಾರಗೊಳಿಸಿದ 30* 45 ಅಳತೆಯ ವೇದಿಕೆಗೆ ಚನ್ನಮ್ಮನ ಜೀವನ ಚರಿತ್ರೆ ಸಂಶೋಧಕ ದೊಡ್ಡಬಾವೆಪ್ಪ ಮೂಗಿ ಅವರ ಹೆಸರಿಡಲಾಗಿದೆ. ಸುಮಾರು 10 ಸಾವಿರ ಅಸನಗಳ ವ್ಯವಸ್ಥೆ ಹೊಂದಿರಲಿದ್ದು, ಎಲ್‌ಇಡಿ ಪರದೆಯ ಹೊಂದಿರಲಿದೆ.
ಬೈಕ್ ರಾಲಿ, ರೂಪಕಗಳ ಮೆರವಣಿಗೆ:ಅಂದು ಬೆಳಗ್ಗೆ 8ಕ್ಕೆ ಚನ್ನಮ್ಮನ ವೃತ್ತದಿಂದ ಐಕ್ಯ ಸ್ಥಳದವರೆಗೆ ನೂರಾರು ಯುವಕ, ಯುವತಿಯರಿಂದ ಬೃಹತ್ ಬೈಕ್ ರ್‍ಯಾಲಿ ನಡೆಯಲಿದೆ. ಪೂರ್ಣ ಕುಂಭ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ಬೆಳಗ್ಗೆ 11ಕ್ಕೆ ವಿಚಾರ ಸಂಕಿರಣ ಜರುಗಲಿದ್ದು, ಉಪನ್ಯಾಸಕರಾದ ಎಸ್.ಆರ್. ಕಲಹಾಳ, ಬಿ.ಎಸ್. ಪುರಾಣಿಕಮಠ, ಡಾ. ಷಣ್ಮುಖ ಗಣಾಚಾರಿ ಚನ್ನಮ್ಮಾಜೀ ಬಾಲ್ಯ, ಸಾಧನೆ, ಹೋರಾಟ ಕುರಿತು ವಿಷಯ ಮಂಡಿಸಲಿದ್ದಾರೆ.ಸಂಜೆ 6.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಎಸ್ಪಿ ಡಾ.ಭಿಮಾಶಂಕರ ಗುಳ್ಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಎಸಿ ಪ್ರಭಾವತಿ ಫಕೀರಪೂರ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
7 ಗಂಟೆಗೆ ಭರತನಾಟ್ಯ, ಸಮೂಹ ನೃತ್ಯ, ಸುಗಮ ಸಂಗೀತ, ಡೈಲಾಗ್ ಸಂಭಾಷಣೆ, ರಸಮಂಜರಿ, ಹಾಸ್ಯ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.ಜನರ ಭಾವನೆಗೆ ಸ್ಪಂದಿಸಿ ಸರ್ಕಾರ ಬೈಲಹೊಂಗದಲ್ಲಿ ಒಂದು ದಿನದ ಮಟ್ಟಿಗೆ ವಿಜಯೋತ್ಸವ ಆಚರಣೆ ಮಾಡುತ್ತಿದ್ದು, ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರಗು ತರಬೇಕು.-ಪ್ರಭಾವತಿ ಫಕೀರಪೂರ, ಉಪವಿಭಾಗಾಧಿಕಾರಿಚನ್ನಮ್ಮಾಜೀ ಉತ್ಸವವನ್ನು ಮಾತೆಯ ಸಮಾಧಿ ಸ್ಥಳದಲ್ಲೂ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಾಡಿನೆಲ್ಲಡೆಯ ಜನತೆ ಬಂದು ಉತ್ಸವ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
- ಮಹಾಂತೇಶ ಕೌಜಲಗಿ ಶಾಸಕಈ ಭಾಗದ ಜನತೆಯ ಆಶಯದಂತೆ ಸರ್ಕಾರ ಚನ್ನಮ್ಮಾಜೀ ಉತ್ಸವ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಈ ಪರಂಪರೆಯನ್ನು ಹೀಗೆಯೇ ಮುಂದುವರೆಸಿ ಪ್ರತಿವರ್ಷ ಆಚರಣೆಗೆ ಕ್ರಮ ಜರುಗಿಸಿ, ಮಾತೆಗೆ ಗೌರವ ಸಮರ್ಪಿಸಬೇಕು.-ಮುರುಗೇಶ ಗುಂಡ್ಲೂರ ಚನ್ನಮ್ಮಾಜೀ ಸ್ಮರಣೋತ್ಸವ ಸಮಿತಿ ಅಧ್ಯಕ್ಷ