ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ನಲ್ಲಿ ಸಿದ್ಧತೆ

| Published : Aug 07 2024, 01:30 AM IST

ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ನಲ್ಲಿ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಂವಿಧಾನಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಗಸ್ಟ್‌ 8ರಿಂದ 19ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಂವಿಧಾನಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಗಸ್ಟ್‌ 8ರಿಂದ 19ರವರೆಗೆ ನಡೆಯಲಿದ್ದು, ಗಾಜಿನಮನೆಯಲ್ಲಿ 6 ಅಡಿ ಎತ್ತರದ ಪೀಠದ ಮೇಲೆ 12 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್‌, ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 32-35 ಲಕ್ಷ ವಿವಿಧ ಬಗೆಯ ಹೂವುಗಳನ್ನು ಬಳಸಲಾಗುವುದು. ಆ.8ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪ ಪ್ರದರ್ಶನ ಉದ್ಘಾಟಿಸುವರು. ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಅಂಬೇಡ್ಕರ್‌ ಅವರ ಮೊಮ್ಮಗ ಭೀಮರಾವ್‌ ಯಶವಂತ ಅಂಬೇಡ್ಕರ್‌ ಉಪಸ್ಥಿತರಿರುವರು ಎಂದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್‌.ರಮೇಶ್‌ ಮಾತನಾಡಿ, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸಂಸತ್‌ ಭವನದ ಪುಪ್ಪ ಪ್ರತಿರೂಪ ಗಮನ ಸೆಳೆಯಲಿದೆ. ಭವನದ ಮೇಲ್ಭಾಗದಲ್ಲಿ 5 ಅಡಿ ಎತ್ತರ ಮತ್ತು 3 ಅಡಿ ಸುತ್ತಳತೆಯ ಅಶೋಕ ಲಾಂಛನ ಇರಲಿದೆ. ಸಂಸತ್‌ ಭವನಕ್ಕೆ ಒಂದು ಬಾರಿಗೆ ಕೆಂಪು ಮತ್ತು ಕಿತ್ತಳೆ ಬಣ್ಣದ 1.8 ಲಕ್ಷ ಗುಲಾಬಿ ಹೂಗಳು ಮತ್ತು ಶ್ವೇತವರ್ಣ, ಪಿಂಕ್‌ ಮತ್ತು ಹಳದಿ ವರ್ಣಗಳ 1.2 ಲಕ್ಷ ಸೇವಂತಿಗೆ ಹೂ ಬಳಸಲಾಗುತ್ತಿದೆ.

ಪ್ರದರ್ಶನದ ಅವಧಿಯಲ್ಲಿ ಒಟ್ಟು ಎರಡು ಬಾರಿಯ ಹೂ ಜೋಡಣೆಗಾಗಿ 3.6 ಲಕ್ಷ ಗುಲಾಬಿ ಹೂಗಳು ಮತ್ತು 2.4 ಲಕ್ಷ ಸೇವಂತಿಗೆ ಹೂವು ಬಳಸಲಾಗುತ್ತದೆ. ಇವುಗಳೊಂದಿಗೆ ಒಂದು ಬಾರಿಗೆ 600 ಕಟ್ಟಿನಂತೆ 2 ಬಾರಿಗೆ 1200 ಕಟ್ಟು ಸಾಂಗ್‌ ಆಫ್‌ ಇಂಡಿಯಾ ಗ್ರೀನ್ ಫೋಲಿಯೇಜ್‌ ಬಳಕೆ ಮಾಡಲಾಗುವುದು ಎಂದು ಹೇಳಿದರು.ಅಂಬೇಡ್ಕರ್‌ ಜನ್ಮಸ್ಥಳ

ಡಾ। ಬಿ.ಆರ್‌.ಅಂಬೇಡ್ಕರ್‌ ಜನ್ಮಸ್ಥಳ, ಅಂಬೇಡ್ಕರ್‌ ಚೈತನ್ಯಭೂಮಿ ಸ್ಮಾರಕದ ಪುಷ್ಪ ಮಾದರಿ, ಅಂಬೇಡ್ಕರ್‌ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಿಂಬಿಸುವ ಕಲಾಕೃತಿ, ಹಿರಾಕುಡ್‌ ಅಣೆಕಟ್ಟೆಯ ಪ್ರತಿಕೃತಿ, ಕೋರೆಗಾಂವ್‌ ಜಯಸ್ಥಂಭದ ಮಾದರಿ, ಕಲಾರಾಮ್‌ ದೇವಾಲಯ ಪ್ರವೇಶ ಸತ್ಯಾಗ್ರಹ ಬಿಂಬಿಸುವ ಕಲಾಕೃತಿ, ಬುದ್ಧ, ಸಂತ ಕಬೀರ, ಪುಲೆ ದಂಪತಿಗಳ ಪ್ರತಿಮೆಗಳು, ಕಂಬಗಳಲ್ಲಿ ಅರಳುವ ಪುಷ್ಪ ಡೂಮ್ಸ್‌ಗಳು ಹೀಗೆ ಹಲವು ಕಲಾಕೃತಿಗಳು ವೀಕ್ಷಕರನ್ನು ಸೆಳೆಯಲಿವೆ.ಎಲ್‌ಇಡಿ ಪರದೆ ಮೇಲೆ

ಅಂಬೇಡ್ಕರ್‌ ಜೀವನ

ಎಲ್‌ಇಡಿ ಪರದೆಗಳ ಮೂಲಕ ಲಾಲ್‌ಬಾಗ್‌ನ 12 ಆಯ್ದ ಸ್ಥಳಗಳಲ್ಲಿ ಡಾ। ಬಿ.ಆರ್‌.ಅಂಬೇಡ್ಕರ್‌ ಅವರ ಜೀವನ ದರ್ಶನ ಅನಾವರಣಗೊಳ್ಳಲಿದೆ. ಗಾಜಿನಮನೆ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಅಂಬೇಡ್ಕರ್‌ ತತ್ವಾದರ್ಶ ಬಿಂಬಿಸುವ ಎರಡು ಕಲಾಕೃತಿಗಳ ಪ್ರದರ್ಶನ. ಬಿದಿರಿನ ಫ್ರೇಮ್‌ನಲ್ಲಿ ಅಂಬೇಡ್ಕರ್ ಅವರ ಚಿತ್ರಗಳ ಪ್ರದರ್ಶನ. ಪುಷ್ಪಗಳಿಂದ ನರ್ತಿಸುವ ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ಮೆಗಾ ಫ್ಲೋರಾಲ್‌ ಫ್ಲೊ, 145 ಹ್ಯಾಂಗಿಂಗ್‌ ಹೂ ಕುಂಡಗಳ ಪ್ರದರ್ಶನ, ಆಕರ್ಷಕ ಸೆಲ್ಫಿ ಪಾಯಿಂಟ್‌, 125ಕ್ಕೂ ಹೆಚ್ಚು ಮಳಿಗೆಗಳ ಸಸ್ಯ ಸಂತೆ ಇರಲಿದೆ.136 ಕ್ಯಾಮೆರಾ ಕಾವಲು

ಲಾಲ್‌ಬಾಗ್ ನಾಲ್ಕು ಪ್ರವೇಶ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‌ಫ್ರೇಮ್‌ ಮೆಟಲ್‌ ಡಿಟೆಕ್ಟರ್ಸ್‌ ಅಳವಡಿಸಲಾಗಿದೆ. ಎಲ್ಲೆಡೆ 136 ಸಿಸಿ ಟಿವಿ ಕ್ಯಾಮೆರಾಗಳು, ಆಯ್ದ ಸ್ಥಳಗಳಲ್ಲಿ 5 ಎತ್ತರದ ಟವರ್‌ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು, ಅಗ್ನಿಶಾಮಕ ದಳದ ವಾಹನ ನಿಯೋಜನೆ, ಒಟ್ಟು 38 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು, ಪ್ಯಾರಾ ಮೆಡಿಕಲ್‌ ತಂಡವುಳ್ಳ ಮಿನಿ ಆಸ್ಪತ್ರೆ ತೆರೆಯಲಾಗಿದೆ.ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಪ್ರವೇಶ ಟಿಕೆಟ್‌ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6ರಿಂದ 9ರವರೆಗೆ ಮತ್ತು ಲಾಲ್‌ಬಾಗ್‌ ಎಲ್ಲ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6.30ರವರೆಗೆ ಟಿಕೆಟ್‌ ನೀಡಲಾಗುವುದು. ಆನ್‌ಲೈನ್‌, ಅಡ್ವಾನ್ಸ್ ಬುಕ್ಕಿಂಗ್‌ ವ್ಯವಸ್ಥೆಯೂ ಇರಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ ₹80, ಮಕ್ಕಳಿಗೆ ₹30 ಟಿಕೆಟ್‌ ಶುಲ್ಕ ನಿಗದಿ ಮಾಡಲಾಗಿದೆ. ರಜಾ ದಿನಗಳಲ್ಲಿ ವಯಸ್ಕರಿಗೆ ₹100 ಮತ್ತು ಮಕ್ಕಳಿಗೆ ₹30 ಇರಲಿದೆ. ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಾವಕಾಶ ಇರಲಿದೆ. ಆದರೆ, ರಜಾ ದಿನಗಳಲ್ಲಿ ಉಚಿತ ಪ್ರವೇಶ ಇರುವುದಿಲ್ಲ ಎಂದು ಉಪ ನಿರ್ದೇಶಕಿ ಜಿ.ಕುಸುಮಾ ಅವರು ತಿಳಿಸಿದರು. ಇಲ್ಲಿ ಮಾತ್ರ ವಾಹನ ನಿಲ್ಲಿಸಿ

ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರು ತಮ್ಮ ವಾಹನಗಳನ್ನು ಡಬಲ್‌ ರೋಡ್‌ ಶಾಂತಿನಗರ ಬಸ್‌ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಜೋಡಿ ರಸ್ತೆಯ ಬಳಿಯ ಹಾಪ್‌ಕಾಮ್ಸ್‌ ಆವರಣ ಹಾಗೂ ಜೆ.ಸಿ.ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲುಗಡೆ ಮಾಡಬಹುದು. ದ್ವಿಚಕ್ರ ವಾಹನಗಳನ್ನು ಆಲ್‌ಅಮೀನ್‌ ಕಾಲೇಜ್‌ ಆವರಣ ನಿಲ್ದಾಣದಲ್ಲಿ ನಿಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್‌ ಮನವಿ ಮಾಡಿದ್ದಾರೆ.ಲಾಲ್‌ಬಾಗಲ್ಲಿ ಜಲಪಾತ ವೀಕ್ಷಿಸಿ

ಲಾಲ್‌ಬಾಗ್‌ನ ಚಿಕ್ಕಕೆರೆಯ ಬಳಿ ಇರುವ ಆಕರ್ಷಕ ಜಲಪಾತವನ್ನು ನಿಗದಿತ ಸಮಯದಲ್ಲಿ ವೀಕ್ಷಿಸಬಹುದಾಗಿದೆ. ಪ್ರತಿದಿನ ಬೆಳಗ್ಗೆ 7ರಿಂದ 7.20, 8 ರಿಂದ 8.20, 11ರಿಂದ 11.20, ಮಧ್ಯಾಹ್ನ 12ರಿಂದ 12.20, 1ರಿಂದ 1.20, 2ರಿಂದ 2.20, 3ರಿಂದ 3.20, ಸಂಜೆ 4ರಿಂದ 4.20, 5ರಿಂದ 5.20 ಮತ್ತು 6ರಿಂದ 6.20.