ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ನಗರದಲ್ಲಿ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ ಈ ಬಾರಿ ಗಣೇಶೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಮತ್ತು ಶ್ರದ್ಧಾಭಕ್ತಿಯಿಂದ ಜೊತೆಗೆ ಶಿಸ್ತು ಬದ್ಧವಾಗಿ ಆಚರಣೆ ಮಾಡಲಾಗುವುದು ಎಂದು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ ಗಣೇಶೋತ್ಸವ ಆಚರಣೆ ಅಂಗವಾಗಿ ಚಿದಂಬರ ಜೋಯಿಸರ ನೇತೃತ್ವದಲ್ಲಿ ನಡೆದ ಹಂದರಗಂಬ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ನಗರದ ಗಾಂಧಿ ಮೈದಾನದಲ್ಲಿ ಸುಮಾರು 62 ವರ್ಷಗಳಿಂದ ಅನೇಕ ಹಿರಿಯರು ತಮ್ಮದೇ ಆದ ರೀತಿಯಲ್ಲಿ ಗಣೇಶೋತ್ಸವ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ. ಅದರಂತೆ ನಾವು ಕೂಡ ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ಸಮಿತಿ ಸದಸ್ಯರು ಒಗ್ಗೂಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಈ ಬಾರಿ ವಿಶೇಷವಾಗಿ ಸುಮಾರು 18 ರಿಂದ 20 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮತ್ತು ಮಳೆಯ ಹವಾಮಾನ ನೋಡಿಕೊಂಡು ಮುಂದೆ ಯಾವ ರೀತಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಜೊತೆಗೆ ಈ ಬಾರಿ ಡಿಜೆ ಸೌಂಡ್ ಸಿಸ್ಟಮ್ ಇಲ್ಲದೆ ಹಲವು ಬಗೆಯ ಸಾಂಸ್ಕೃತಿಕ ಕಲಾ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಗಣಪತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಹೇಳಿದರು.ಶ್ರೇಯಾ ಆಸ್ಪತ್ರೆಯ ಡಾ. ರಶ್ಮಿ ಮಾತನಾಡಿ, ಗಣೇಶೋತ್ಸವ ಆಚರಣೆ ಮಾಡುವಾಗ ಶ್ರದ್ಧಭಕ್ತಿಯಿಂದ ಆಚರಣೆ ಮಾಡುವಂತಾಗಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಆಚರಣೆ ಮಾಡಿದಾಗ ಹಬ್ಬವನ್ನು ಆಚರಿಸಿದ್ದಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ ಎಂ. ಬಿ ಅಣ್ಣಪ್ಪ ಮಾತನಾಡಿ, ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆಯನ್ನು ನುರಿತ ವೈದ್ಯರಿಂದ ನಡೆಸಲಾಗುವುದು. ಗಣಪತಿ ವಿಸರ್ಜನೆಯನ್ನು ಹನ್ನೊಂದನೆಯ ದಿನದಂದು ಮಾಡಲಾಗುತ್ತದೆ ಎಂದರು.ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ ಮಾತನಾಡಿ ಈ ಬಾರಿ ಗಣೇಶೋತ್ಸವ ಆಚರಣೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಮತ್ತು ಮಕ್ಕಳಿಗೆ ಸಾಹಿತ್ಯಭಿಮಾನ ಮೂಡಿಸವ ದೃಷ್ಟಿಯಿಂದ ಕವಿಗೊಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಉತ್ಸವ ಸಮಿತಿಯ ಕೆ.ಬಿ. ರಾಜಶೇಖರ್, ಸದಸ್ಯರಾದ ಶಂಕರ್ ಖಟಾವ್ಕಾರ್, ಕೆ.ಜಿ.ಸಿದ್ದೇಶ್, ಸುಮಿತ್ರಮ್ಮ, ಸಂತೋಷ ದೊಡ್ಡಮನೆ ಜೋಸೆಫ್ ದಿವಾಕರ, ಟಿ.ಜೆ. ಮುರುಗೇಶಪ್ಪ, ತಿಪ್ಪಣ್ಣ, ಸಚ್ಚಿನ್ ಕೊಂಡಜ್ಜಿ, ಲಲಿತಮ್ಮ, ಬಾತಿ ಚಂದ್ರಶೇಖರ್, ಸುರೇಶ್ ಚಂದಪೂರ್, ಸ್ಟಿಲ್ ಮಂಜುನಾಥ್, ಎಂಜಿನಿಯರ್ ರವಿಂದ್ರನಾಥ್, ಸಾಗರ್, ಜಿ.ಕೆ.ಪ್ರವೀಣ್, ಎಚ್.ಸಿ. ಕೀರ್ತಿಕುಮಾರ್ ಇತರರು ಹಾಜರಿದ್ದರು.