ದೊಡ್ಡಬಳ್ಳಾಪುರದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ: ಶಾಸಕ ಧೀರಜ್ ಮುನಿರಾಜು

| Published : Aug 10 2024, 01:41 AM IST

ದೊಡ್ಡಬಳ್ಳಾಪುರದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ: ಶಾಸಕ ಧೀರಜ್ ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಆಗಸ್ಟ್ 15ರಂದು ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

-ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ -ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಆಗಸ್ಟ್ 15ರಂದು ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕೆಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಧ್ವಜಾರೋಹಣ, ನಿರೂಪಣೆ, ರಾಷ್ಟ್ರಗೀತೆ ಮೊದಲಾಗಿ ಕಾರ್ಯಕ್ರಮಗಳ ಸಿದ್ಧತೆ ಬಗ್ಗೆ ಪೂರ್ವಭಾವಿ ಸಭೆ ನಡೆಸಿ, ಯಾವುದೇ ಅಭಾಸಗಳಾಗದಂತೆ ನೋಡಿಕೊಳ್ಳಬೇಕಿದೆ. ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿರುವ ಸಾಧಕರಿಗೆ ಸನ್ಮಾನ ವಿಚಾರದಲ್ಲಿ ಲೋಪ ಉಂಟಾಗದಂತೆ ಹಾಗೂ ಯಾವುದೇ ಒತ್ತಡಕ್ಕೆ ಮಣಿಯದೇ ಅರ್ಹರನ್ನು ಸನ್ಮಾನಿಸಬೇಕಿದೆ. ಈ ಹಿಂದೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿತರಾದವರಿಗೆ ಮತ್ತೆ ಸನ್ಮಾನ ಮಾಡುವುದು ಬೇಡ. ಆಗಮಿಸುವ ಶಾಲಾ ಮಕ್ಕಳಿಗೆ ಉಪಹಾರ, ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಧ್ವಜ ಸ್ತಂಭ ಹಾಗೂ ಧ್ವಜಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ. ಕ್ರೀಡಾಂಗಣದ ಸ್ವಚ್ಛತೆ, ಸರ್ಕಾರಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ, ಪ್ಲಾಸ್ಟಿಕ್ ಧ್ವಜ ನಿಷೇಧ ಮೊದಲಾಗಿ ಸಮಾರಂಭವನ್ನು ಶಿಸ್ತುಬದ್ಧವಾಗಿ ಅರ್ಥಪೂರ್ಣವಾಗಿ ಆಚರಿಸುವಂತೆ ಸಲಹೆ- ಸೂಚನೆಗಳನ್ನು ನೀಡಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅಚಾತುರ್ಯ ಉಂಟಾಗದಂತೆ ಎಚ್ಚರಿಕೆ ವಹಿಸಿ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಬೇಕಿದೆ. ಸಭೆಯಲ್ಲಿ ಬಂದಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮ ನಡೆಸಬೇಕಿದೆ. ಅರ್ಹರನ್ನು ಸನ್ಮಾನಿಸುವುದು ಹಾಗೂ ಸಮಾರಂಭ ಆಯೋಜನೆಗೆ ರಚಿಸಿರುವ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಇದಕ್ಕೆ ಯಾರದ್ದೇ ಹಸ್ತಕ್ಷೇಪ ಇರುವುದಿಲ್ಲ. ಯಾವುದೇ ಲೋಪಗಳಾಗದಂತೆ ಸಮಾರಂಭವನ್ನು ಶಿಸ್ತುಬದ್ಧವಾಗಿ ಆಯೋಜಿಸಲು ಸೂಚಿಸಿದರು.

ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್‌ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ಆಚರಿಸಲಾಗುವುದು. ಆಹ್ವಾನ ಪತ್ರಿಕೆಯನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಮುದ್ರಿಸಲಾಗುವುದು. ಶಾಲಾ ಮಕ್ಕಳನ್ನು ಕರೆತರುವುದು, ಸಮಾರಂಭದ ವೇದಿಕೆ ಸಿದ್ಧಪಡಿಸುವುದು ಸೇರಿ ವಿವಿಧ ಇಲಾಖೆ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಪೌರಾಯುಕ್ತ ಕಾರ್ತಿಕ್ ಈಶ್ವರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯೀದಾ ಅನೀಸ್, ತಾಲೂಕು ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ನಾಗರಾಜ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ :

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸಾಧಕರು ತಮ್ಮ ಸಾಧನೆಯ ಮಾಹಿತಿ, ಹಾಗೂ ಸ್ವ ವಿವರಗಳನ್ನೊಳಗೊಂಡ ಅರ್ಜಿಯನ್ನು ಆ.12ರ ಒಳಗಾಗಿ ತಾಲೂಕು ಕಚೇರಿಗೆ ಸಲ್ಲಿಸಬೇಕಿದೆ.