ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಜೂನ್‌ 28ರ ಭಾನುವಾರ ಆಯೋಜಿಸಲಾಗಿರುವ ‘ಬಸವಾದಿ ಶಿವಶರಣರ ಹಿಂದೂ ಸಮಾವೇಶ’ಕ್ಕೆ ಎದುರಾಗಿದ್ದ ಆರಂಭಿಕ ಕಾನೂನು ತೊಡಕುಗಳು ಈಗ ನಿವಾರಣೆಯಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಕನ್ಹೇರಿ ಶ್ರೀಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಸಮಾವೇಶದ ನಿಮಿತ್ತ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಸಮಾವೇಶದ ಹೆಸರಿನಲ್ಲಿ ಬಸವಾದಿ ಶಿವಶರಣರ ''''''''ಹಿಂದೂ'''''''' ಸಮಾವೇಶ ಪದ ಬಳಸುವ ವಿಚಾರವಾಗಿ ವಿರೋಧಿಸಿ ಹಾಗೂ ಕನ್ಹೇರಿ ಕಾಡಸಿದ್ದೇಶ್ವರ ಶ್ರೀಗಳು ಬಸವಪರ ಮಠಾಧೀಶರಿಗೆ ಅವಾಚ್ಯವಾಗಿ ನಿಂದಿಸಿದ್ದು, ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿದ್ದಾರೆ, ಹೀಗಾಗಿ ಅವರಿಗೆ ಬಸವಕಲ್ಯಾಣ ಪ್ರವೇಶ ನಿಷೇಧಿಸುವ ಕುರಿತು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಸೇರಿದಂತೆ ಬಸವ ಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಬಸವಕಲ್ಯಾಣ ತಹಸೀಲ್ದಾರರು ಸಮಾವೇಶಕ್ಕೆ ಪರವಾನಗಿ ನೀಡಲಾಗದು ಎಂದು ಸ್ಪಷ್ಟಪಡಿಸಿ ಆದೇಶಿಸಿದ್ದರು. ಆದರೆ, ಇದನ್ನು ಪ್ರಶ್ನಿಸಿ ಸಮಾವೇಶದ ಆಯೋಜಕರು ಹೈಕೋರ್ಟ್‌ ಮೆಟ್ಟಿಲೇರಿ ಸಮಾವೇಶಕ್ಕೆ ಷರತ್ತುಬದ್ಧ ಪರವಾನಿಗೆ ಪಡೆದಿದ್ದರು. ಕನ್ಹೇರಿ ಶ್ರೀಗಳು ಸಮಾವೇಶದಲ್ಲಿ ಮಾತನಾಡುವಂತಿಲ್ಲ, ಇನ್ನೊಬ್ಬರ ಮುಖೇನ ಮಾತನಾಡಿಸುವಂತಿಲ್ಲ ಹಾಗೆಯೇ ಪ್ರಚೋದನಾಕಾರಿ ಭಾಷಣವನ್ನು ಯಾರೂ ಮಾಡುವಂತಿಲ್ಲ, 2500ಕ್ಕಿಂತ ಹೆಚ್ಚು ಜನ ಸೇರಿಸುವಂತಿಲ್ಲ ಎಂದೆಲ್ಲ ಹೈಕೋರ್ಟ್‌ ಸೂಚಿಸಿದ್ದಾಗಿ ತಿಳಿದುಬಂದಿತ್ತು.

ಶನಿವಾರ ಸಂಜೆ ಕನ್ಹೇರಿ ಶ್ರೀಗಳು ಬಸವಕಲ್ಯಾಣ ನಗರಕ್ಕೆ ಆಗಮಿಸಿ, ನಗರದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿದ ಶ್ರೀಗಳು, ಜಗದ್ಗುರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ಗುಂಡುರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ಬರಮಾಡಿಕೊಂಡಿದ್ದಾರೆ.


ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ನಡೆಯಲಿರುವ ಸಮಾವೇಶದ ವೇದಿಕೆ ಹಾಗೂ ಸಭಾಂಗಣದ ಸಿದ್ಧತೆಗಳನ್ನು ಕಾರ್ಯಕ್ರಮದ ಪ್ರಮುಖರು ಶನಿವಾರ ಪರಿಶೀಲಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಗುಂಡುರೆಡ್ಡಿ, ಬಸವರಾಜ ಸ್ವಾಮಿ, ತಡೋಳಾ ಶ್ರೀಗಳು, ಸಿದ್ರಾಮಪ್ಪ ಗುದಗೆ, ರಾಜು ಪಾಟೀಲ್‌ ಹಳ್ಳಿ ಮುಂತಾದ ಮುಖಂಡರು ಸ್ಥಳದಲ್ಲಿದ್ದು, ಕಾರ್ಯಕ್ರಮದ ರೂಪರೇಷೆಗಳನ್ನು ಅಂತಿಮಗೊಳಿಸಿದರು.

ಸಮಾವೇಶವು ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ಜರುಗಲು ಅನುವಾಗುವಂತೆ ಇಲಾಖೆಯು ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಿದೆ. ಭದ್ರತೆಗಾಗಿ ಹಲವಾರು ಪೊಲೀಸ್‌ ಅಧಿಕಾರಿಗಳು, 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಮಾವೇಶಕ್ಕೆ ಯಾವ್ಯಾವ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯರು ಆಗಮಿಸಲಿದ್ದಾರೆ ಎಂಬುವುದು ನಿಗೂಢವಾಗಿದ್ದು, ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಲವು ಸಂಘಟನೆಗಳು ಹೈಕೋರ್ಟ್‌ ಆದೇಶದ ನಂತರ ಸಮಾವೇಶದಿಂದ ದೂರವುಳಿಯುವ ನಿರ್ಧಾರ ಮಾಡಿದ್ದರೆ, ಕೆಲವರು ಪ್ರತಿಭಟಿಸುವ ನಿರ್ಧಾರವನ್ನು ಹಿಂಪಡೆದಿಲ್ಲ. ಹೀಗಾಗಿ ಜೂ. 28ರಂದು ನಡೆಯುವ ಈ ಕಾರ್ಯಕ್ರಮದ ಸುತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.