ಸಾರಾಂಶ
ಮಲೆ ಮಹದೇಶ್ವರ ಬೆಟ್ಟ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನ । ಅರಣ್ಯ ಇಲಾಖೆಯಿಂದ ಕ್ರಮ । ಜನರಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ
ಜಿ. ದೇವರಾಜನಾಯ್ದುಕನ್ನಡಪ್ರಭ ವಾರ್ತೆ ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲು ತಾಳ ಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ತಯಾರಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಲವಾರು ವರ್ಷಗಳಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಹಲವಾರು ಮಾರ್ಗಗಳಲ್ಲಿ ಭಕ್ತರಿಗೆ ಅರಿವು ಮೂಡಿಸಿ, ಬರುವಂತ ಭಕ್ತರಿಗೆ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಸಹ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತೊಂದು ಹೆಜ್ಜೆ ಇಟ್ಟು ಅರಣ್ಯ ಇಲಾಖೆ ಮುಖಾಂತರ ತಾಳಬೆಟ್ಟದಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದೆ.ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಅವರ ಆದೇಶದ ಅನ್ವಯ ಅರಣ್ಯ ಇಲಾಖೆ ತಾಳಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಸದ್ದಿಲ್ಲದೆ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದೆ. ಪ್ಲಾಸ್ಟಿಕ್ ಮುಕ್ತಗೊಳಿಸಲು ಚೆಕ್‌ಪೋಸ್ಟ್ ತೆರೆದರೆ ಒಳ್ಳೆಯದು ಟೋಲ್ ನಿರ್ಮಾಣ ಮಾಡಿದರೆ ಮಾದಪ್ಪನ ಭಕ್ತರಿಂದ ಪ್ರಜ್ಞಾವಂತ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗಲಿದೆ. 15 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಚೆಕ್‌ಪೋಸ್ಟ್‌ಗಳಿದ್ದರೆ ಮಾದಪ್ಪನ ಭಕ್ತರಿಗೆ ಹೊರೆಯಾಗುತ್ತದೆ. ಲಕ್ಷಾಂತರ ಭಕ್ತರು ಬರುವ ಈ ಕ್ಷೇತ್ರದಲ್ಲಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಈಗಾಗಲೇ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ ಬರುವಂತಹ ವಾಹನಗಳಿಗೆ ಟೋಲ್ ನಿಗದಿ ಮಾಡಲಾಗಿದೆ. ಆದರೆ ತಾಳಬೆಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ತಪಾಸಣಾ ಚೆಕ್‌ಪೋಸ್ಟ್ ನೆಪದಲ್ಲಿ ಟೋಲ್ ಸಂಗ್ರಹಿಸಿದರೆ ಭಾರಿ ವಿರೋಧ ಎದುರಿಸಬೇಕಾಗುತ್ತದೆ.
ಈ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಅವರು ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಆದೇಶ ನೀಡಿದ್ದರು. ಸಿಬ್ಬಂದಿ ಕೊರತೆಯಿಂದ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ ತಪಾಸಣೆ ಮಾಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ತಡೆಯಲಾಗುವುದು. ಬಿಳಿಗಿರಿರಂಗನಬೆಟ್ಟ ಇನ್ನಿತರ ಶ್ರೀ ಕ್ಷೇತ್ರಗಳಲ್ಲಿಯೂ ಸಹ ಇದೇ ರೀತಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಅದೇ ರೀತಿ ತಾಳಬೆಟ್ಟದಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಮಲೆ ಮಹದೇಶ್ವರ ವನ್ಯಜೀವಿ ಅರಣ್ಯ ಡಿಸಿಎಫ್ ಸಂತೋಷ್ ಕುಮಾರ್ ಹೇಳಿದರು.ಪ್ಲಾಸ್ಟಿಕ್ ಮುಕ್ತ, ಕಠಿಣ ಕ್ರಮ
ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳಿಂದ ಮತ್ತು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಬರುವ ಭಕ್ತರು ಪ್ಲಾಸ್ಟಿಕ್ ಬಾಟಲ್ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದು ಪ್ರಾಣಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಅದನ್ನು ತಿಂದು ಪ್ರಾಣಿಗಳು ಜೀವ ಹಾನಿ ಉಂಟಾಗುವುದನ್ನು ತಡೆಯಲು ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಚೆಕ್‌ಪೋಸ್ಟ್‌ನಲ್ಲೆ ತಪಾಸಣೆ ಮಾಡಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲಾಗುವುದು ಎನ್ನುತ್ತಾರೆ ಮಲೆ ಮಹದೇಶ್ವರ ವನ್ಯಜೀವಿ ಅರಣ್ಯದ ಡಿಸಿಎಫ್ ಸಂತೋಷ್‌ಕುಮಾರ್.ತಾಳಬೆಟ್ಟದವರೆಗೆ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಇದ್ದು, ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ಟೋಲ್ ನಿರ್ಮಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.
ಸರಸ್ವತಿ, ಕಾರ್ಯದರ್ಶಿ, ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.ಹನೂರು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳ ಬೆಟ್ಟದಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆ.