ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ಕರಾವಳಿಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ಖರೀದಿಯ ಭರಾಟೆಯೂ ಜೋರಾಗಿಯೇ ಇದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶನ ಹಬ್ಬ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ೩೮೬ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ. ಇದಕ್ಕಾಗಿ ಪೆಂಡಾಲ್ ನಿರ್ಮಾಣ, ಸ್ವಾಗತ ಕಮಾನು, ದೀಪಾಲಂಕಾರ ಸಹಿತ ಉತ್ಸವ ಆಚರಣೆಗೆ ಸಂಬಂಧಿಸಿದ ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ಶುಕ್ರವಾರ ಸಂಜೆಯಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ಕೊಂಡೊಯ್ಯವ ಸಂಭ್ರಮ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 481 ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಕಳೆದ ವರ್ಷ 474 ಪೆಂಡಾಲ್‌ಗಳಿಗೆ ಅನುಮತಿ ನೀಡಲಾಗಿತ್ತು.ಖರೀದಿ ಭರಾಟೆ: ಗಣೇಶೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಬ್ಬು, ಹೂವು, ಹಣ್ಣುಗಳ ಖರೀದಿ ಜೋರಾಗಿ ನಡೆಯುತ್ತಿದೆ. ದ.ಕ.ದಲ್ಲಿ ಮಳೆಯ ಆತಂಕದ ನಡುವೆಯೂ ಖರೀದಿ ನಡೆಯುತ್ತಿದೆ. ಗಣೇಶನಿಗೆ ಪ್ರಿಯವಾದ ವಸ್ತುಗಳ ಜತೆಗೆ ಪೂಜಾ ಸಾಮಾಗ್ರಿಗಳ ಖರೀದಿ, ಹಣ್ಣು ಹಂಪಲು, ಹೂವು, ತರಕಾರಿಗಳು ದುಬಾರಿ ದರದ ನಡುವೆಯೂ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕಬ್ಬಿಗೆ (೧೨) ೩೮೦ರಿಂದ ೪೦೦ ರು. ದರವಿದೆ. ಮೂಡೆ ೧೦೦ ರು. ೫ ರಿಂದ ೬ ಕಟ್ಟು ಸಿಗುತ್ತಿದೆ. ಶುಕ್ರವಾರ ಗೌರಿ ಹಬ್ಬವಾಗಿರುವುದರಿಂದ ಕಪ್ಪು ಬಳೆಗಳ ಖರೀದಿಯೂ ನಡೆದಿದೆ. ಖರೀದಿ ಭರಾಟೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ಕಾಣಿಸಿದೆ. ಮಂಗಳೂರಿನ ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಸಡಗರದಂದು ಕದಿರು ವಿನಿಯೋಗ ಕೂಡ ನಡೆದಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಕಳೆದ ರಾತ್ರಿ ನಿರಂತರ ಮಳೆ ಸುರಿದಿದೆ. ಶುಕ್ರವಾರ ಹಗಲಿನ ವೇಳೆ ಬಿಸಿಲಿನ ವಾತಾವರಣವಿದ್ದರೂ ಮಳೆ ಆತಂಕ ಮರೆಯಾಗಿಲ್ಲ.
ಉಡುಪಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ವೈಭವ ವಿಜೃಂಭಣೆ ಹೆಚ್ಚುತ್ತಿದ್ದು, ಗಣೇಶನ ಪೆಂಡಾಲ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಶನಿವಾರ ಸಂಭ್ರಮದ ಗಣೇಶ ಚತುರ್ಥಿ ಹಬ್ಬದ ಆಚರಣೆ ನಡೆಯುತ್ತಿದ್ದು,ಉಡುಪಿ ಜಿಲ್ಲೆಯಲ್ಲಿ ಗಣೇಶೋತ್ಸವ ನಡೆಯುವ ಒಟ್ಟು 406 ಸಾಮಾನ್ಯ, 73 ಸೂಕ್ಷ್ಮ, 2 ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಗಣೇಶೋತ್ಸವ ಆಚರಣೆ, ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ 3 ಕೆಎಸ್ಆರ್ಪಿ ಮತ್ತು 8 ಡಿಎಆರ್ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಯಾವುದೇ ಪೆಂಡಾಲ್‌ಗಳಲ್ಲಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.ಗಣೇಶೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಬಂಟಿಂಗ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳ ಪೂರ್ವಾನುಮತಿಯನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಜೊತೆಗೆ ಪರಿಸರಕ್ಕೆ ಹಾನಿಯಾಗುವಂತಹ ಬಣ್ಣಗಳಿಂದ ರಚಿಸಲಾದ ಗಣೇಶ ವಿಗ್ರಹಗಳನ್ನು ನಿಷೇಧಿಸಿದ್ದು, ಪರಿಸರಸ್ನೇಹಿ ಗಣಪತಿ ಪ್ರತಿಷ್ಠಾಪಿಸುವಂತೆ ಸೂಚಿಸಲಾಗಿದೆ.