ಸಾರಾಂಶ
ತಲಕಾವೇರಿ ಸನ್ನಿಧಿಯಲ್ಲಿ ಮೇ 11ರಿಂದ ಆರಂಭವಾಗಲಿರುವ ಅತಿರುದ್ರ ಜಪಯಜ್ಞ ಕೈಂಕರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಮೇ11 ರಿಂದ ಆರಂಭವಾಗಲಿರುವ ಅತಿರುದ್ರ ಜಪಯಜ್ಞ ಕೈಂಕರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ತಿಳಿಸಿದ್ದಾರೆ.ಮೇ 21ರಂದು ಜಪಯಜ್ಞ ಸಾಂಗತಗೊಳ್ಳಲಿರುವ ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಗೆ ಕೊಡಗು ಜಪಯಜ್ಞ ಸಮಿತಿಯ ನಿಯೋಗದೊಂದಿಗೆ ತೆರಳಿದ ಅವರು ಶ್ರೀ ಚಂಡಿಕಾ ಹೋಮದ ಸಿದ್ಧತೆಗಳ ಕುರಿತು ಪರಿಶೀಲಿಸಿದರು.
ಶ್ರೀ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರು ಮೇ 21 ರಂದು ಕಣಿವೆಗೆ ಆಗಮಿಸುವರು. ಅಂದು ಋತ್ವಿಜರಿಂದ ಎರಡು ಆವರ್ತ ಶ್ರೀ ರುದ್ರ ಜಪ ನಡೆಯುವುದು ಎಂದರು.ಮೇ 11 ರಂದು ಬೆಳಗ್ಗೆ 6.30 ಗಂಟೆಗೆ ಜಪಯಜ್ಞ ಆರಂಭಗೊಳ್ಳಲಿದ್ದು, ಅಂದು ಅರುಣೋದಯದ ಸಮಯಕ್ಕೆ ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ. ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಪ್ರಶಾಂತ್ ಆಚಾರ್ಯರು ಇದರ ನೇತೃತ್ವವನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ನಡೆಯದ ಇಂತಹ ಜಪಯಜ್ಞದ ಕಾರ್ಯಕ್ಕೆ ಆಸ್ತಿಕ ಬಂಧುಗಳು ಎಲ್ಲಾ ರೀತಿಯ ಸಹಾಯವನ್ನು ನೀಡಿ ಯಶಸ್ವಿಗೊಳಿಸಬೇಕು. ಈ ಸೇವಾ ಕಾರ್ಯಕ್ಕೆ ಉದಾರ ನೆರವು ಹಾಗೂ ಊಟೋಪಚಾರದ ವ್ಯವಸ್ಥೆಯ ಪರಿಕರಗಳನ್ನು ನೀಡುವವರು ಮೊ.ಸಂ. 9945853543 ಹಾಗೂ 9448647183ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಸುರೇಶ್ ಶ್ರೇಷ್ಠಿ, ಜಪಯಜ್ಞ ಸಮಿತಿಯ ಬಿ.ಸಿ.ದಿನೇಶ್, ಉಪಾಧ್ಯಕ್ಷ ಸಂಪತ್ ಕುಮಾರ್ ಸರಳಾಯ ಹಾಗೂ ಪ್ರತಿನಿಧಿ ಎಸಳೂರು ಉದಯಕುಮಾರ್ ಉಪಸ್ಥಿತರಿದ್ದರು.