ಕನ್ನಡ ಜ್ಯೋತಿ ರಥ ಯಾತ್ರೆ ಸ್ವಾಗತಕ್ಕೆ ಸಿದ್ಧತೆ

| Published : Sep 26 2024, 10:21 AM IST

ಸಾರಾಂಶ

ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಸೆ. ೨೭ರಂದು ಸವಣೂರಿಗೆ ಆಗಮಿಸಲಿದ್ದು, ತಹಸೀಲ್ದಾರ್‌ ಭರತರಾಜ್‌ ಕೆ.ಎನ್. ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸವಣೂರು: ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಸೆ. ೨೭ರಂದು ಸವಣೂರಿಗೆ ಆಗಮಿಸಲಿದ್ದು, ಎಲ್ಲ ಇಲಾಖೆಗಳು, ಎಲ್ಲ ಸಂಘ-ಸಂಸ್ಥೆಗಳು ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಅತ್ಯಂತ ಅದ್ಧೂರಿಯಾಗಿ ಸ್ವಾಗತಿಸೋಣ ಎಂದು ತಹಸೀಲ್ದಾರ್‌ ಭರತರಾಜ ಕೆ.ಎನ್. ಹೇಳಿದರು.

ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ರಥಯಾತ್ರೆ ಸ್ವಾಗತಿಸುವ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಜ್ಯೋತಿ ರಥ ಯಾತ್ರೆ ಮಧ್ಯಾಹ್ನ ತಾಲೂಕಿನ ಹೊಸ ನೀರಲಗಿ ಗ್ರಾಮಕ್ಕೆ ಆಗಮಿಸಲಿದ್ದು, ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಪಿಡಿಒ ಹಾಗೂ ಗ್ರಾಮದ ಪ್ರಮುಖರು ಸೇರಿ ಪೂರ್ಣಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಅದೇ ರೀತಿ ಗುಂಡೂರು ಗ್ರಾಮದಲ್ಲಿ ಸ್ವಾಗತಿಸಿ, ಬೀಳ್ಕೊಟ್ಟ ಆನಂತರ ಪಟ್ಟಣದ ಗೋಕಾಕ ವೃತ್ತದಲ್ಲಿ ಆಯ್ದ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರೊಂದಿಗೆ ಸ್ವಾಗತಿಸಿ, ಬಳಿಕ ದೊಡ್ಡ ಕೆರೆಯಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಆದೇಶಿಸಿದ ತಹಸೀಲ್ದಾರ್, ಇದರೊಂದಿಗೆ ವಿವಿಧ ಮಹಿಳಾ ಸಂಘಟನೆಗಳ, ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆ ದೊಡ್ಡ ಕೆರೆ(ಮೋತಿ ತಲಾಬ್)ಯಿಂದ ಆರಂಭಗೊಂಡು ಬುಧವಾರ ಪೇಟೆ, ಸಿಂಪಿಗಲ್ಲಿ ಮಾರ್ಗವಾಗಿ ಡಾ. ಅಂಬೇಡ್ಕರ್ ವೃತ್ತದಿಂದ ಬಸ್‌ಸ್ಟ್ಯಾಂಡ್‌ ಮಾರ್ಗವಾಗಿ ಬಸ್ ಘಟಕಕ್ಕೆ ಸಂಪನ್ನಗೊಂಡು ಸಮಾರೋಪಗೊಳ್ಳಲಿದೆ.

ಸೆ. ೨೭ರಂದು ಶುಕ್ರವಾರ ಸಂತೆ ಇರುವುದರಿಂದ ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸೂಚಿನೆ ನೀಡಿದರು. ಸಂತೆ ವ್ಯಾಪಾರಸ್ಥರ ಸಹಕಾರದೊಂದಿಗೆ ಯಾತ್ರೆಯ ಮಾರ್ಗದಲ್ಲಿ ಸಂತೆ ನಡೆಸದಂತೆ ಪುರಸಭೆ ಮುಖ್ಯಾಧಿಕಾರಿ ಕ್ರಮವಹಿಸಬೇಕು. ಮಾರ್ಗದಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚಿ, ಜತೆಗೆ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಸಭೆಗೆ ಆಗಮಿಸದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, ಯಾತ್ರೆಯ ಸ್ವಾಗತ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಆಗಮಿಸಲು ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.

ಕಸಾಪ ಅಧ್ಯಕ್ಷ ಸಿ.ಎನ್. ಪಾಟೀಲ, ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ಪರಶುರಾಮ ಈಳಗೇರ, ಬಸವರಾಜ ಇಂಗಳಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಇದ್ದರು.