ಎಲ್ಲಾ ವರ್ಗದ ಭಕ್ತರು, ಲಕ್ಷ ದೀಪೋತ್ಸವ ಸಮಿತಿ ಸದಸ್ಯರ ಜೊತೆಗೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ಜೋಡಿಸಲು ಮುಂದಾಗಿದ್ದಾರೆ. ಗಂಡ ಭೇರುಂಡ ವೃತ್ತದಲ್ಲೇ ಸುಮಾರು 2 ಸಾವಿರ ದೀಪಗಳನ್ನು ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಜ.15ರ ಗುರುವಾರ ಮಕರ ಸಂಕ್ರಾಂತಿಯಂದು ನಡೆಯಲಿರುವ ಲಕ್ಷ ದೀಪೋತ್ಸವಕ್ಕೆ ಸಿದ್ಧತೆ ನಡೆದಿದೆ.

ಪ್ರತಿ ವರ್ಷದಂತೆ ಈ ಬಾರಿ ಲಕ್ಷ ದೀಪೋತ್ಸವ ಅಂಗವಾಗಿ ದೇವಾಲಯದ ಮುಂಭಾಗದ ರಸ್ತೆಯ ಎರಡೂ ಕಡೆಗಳಲ್ಲಿ ಮರಗಳನ್ನು ನೆಟ್ಟು ಬಿದಿರಿನ ಪಟ್ಟಿ ಕಟ್ಟುವ ಎಲ್ಲಾ ಸಿದ್ಧತೆಗಳು ನಡೆದಿವೆ. ಬಿದಿರಿನ ಪಟ್ಟಿಗೆ ಸುಣ್ಣ ಬಣ್ಣ ಬಳಿದು ದೀಪಗಳ ಅಳವಡಿಸಲು 1 ಲಕ್ಷ ಮಣ್ಣಿನ ದೀಪಗಳನ್ನು ಸಹ ಸಂಗ್ರಹಿಸಲಾಗಿದೆ. ದೀಪಗಳಿಗೆ ಒಂದು ಸಾವಿರ ಲೀಟರ್ ಎಣ್ಣೆ ಬಳಕೆ, ಒಂದು ದೀಪಕ್ಕೆ ಎರಡು ಬತ್ತಿಯಂತೆ ಎರಡು ಲಕ್ಷ ದೀಪದ ಬತ್ತಿ ಹಾಕಿ ಸಿದ್ಧತೆಗಳು ನಡೆಯುತ್ತಿದೆ.

ಎಲ್ಲಾ ವರ್ಗದ ಭಕ್ತರು, ಲಕ್ಷ ದೀಪೋತ್ಸವ ಸಮಿತಿ ಸದಸ್ಯರ ಜೊತೆಗೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ಜೋಡಿಸಲು ಮುಂದಾಗಿದ್ದಾರೆ. ಗಂಡ ಭೇರುಂಡ ವೃತ್ತದಲ್ಲೇ ಸುಮಾರು 2 ಸಾವಿರ ದೀಪಗಳನ್ನು ಅಳವಡಿಸಲಾಗಿದೆ. ಶ್ರೀರಂಗನಾಥ ಸ್ವಾಮಿ ಗೋಪುರದ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಬಿದಿರು ದಬ್ಬೆಗಳಿಂದ ಸಾಲುಗಳನ್ನು ಕಟ್ಟಿ ದೀಪಗಳನ್ನು ಇಟ್ಟು ಎಣ್ಣೆ ಬತ್ತಿಗಳಿಡಲಾಗಿದೆ. ಇದರ ಜೊತೆಗೆ ದೇವಾಲಯದ ಮುಂಭಾಗ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ.

ಸಂಕ್ರಮಣದಲ್ಲಿ ಸೂರ್ಯನ ಪಥವನ್ನು ಉತ್ತರಾಯಣ ದಿಕ್ಕಿಗೆ ಬದಲಾಯಿಸುವ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಸದಸ್ಯರು ಕೋರಿದ್ದಾರೆ. ಅಲ್ಲದೆ ಅಂದು ಗುರುವಾರ ಸಂಜೆ ವಿಷ್ಣು ಸಹಸ್ರ ಹೋಮವನ್ನು ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಗೋಧೂಳಿ ಲಗ್ನದಲ್ಲಿ ಭಕ್ತರಿಂದ ದೀಪಗಳನ್ನು ಹಚ್ಚಲಾಗುತ್ತದೆ ಎಂದು ಸಮಿತಿ ಸದಸ್ಯರು ತಿಳಿದರು.