ಸಾರಾಂಶ
ಗದಗ: ರಾಜ್ಯ ನದಾಫ್, ಪಿಂಜಾರ್ ಸಂಘದ 32ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಮಹಿಳಾ ಸಮಾವೇಶ ಅ. 27 ರಂದು ಗದಗನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲಸಾಬ್ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಂಸ್ಥಾಪನಾ ದಿನಾಚರಣೆ ಹಾಗೂ ಮಹಿಳಾ ಸಮಾವೇಶದ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಲವಾರು ರೀತಿಯಲ್ಲಿ ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದು, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿ ರಾಜ್ಯ ಮಟ್ಟದ ಸನ್ಮಾನ ಮಾಡಲಾಗುವುದು ಎಂದರು.ಪ್ರಸ್ತುತ ಸಂಸ್ಥಾಪನಾ ದಿನಾಚರಣೆ ಜತೆಗೆ ಮಹಿಳಾ ಸಮಾವೇಶ ಆಯೋಜಿಸಿದ್ದು, ಅವರಿಗೂ ಸಮಾಜ, ಸಂಘಟನೆಯ ಮಹತ್ವ ಬಗ್ಗೆ ಜವಾಬ್ದಾರಿ ಸಿಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಜ್ಯ,ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಮಹನೀಯರನ್ನು ಗುರುತಿಸಿ ಎಚ್.ಇಬ್ರಾಹಿಂ,ಜೆ ಇಮಾಮ್ ಹಾಗೂ ಪಿಂಜಾರ್ ಪೈಲ್ವಾನ್ ರಮಜಾನ್ ಸಾಬ್ ರಾಜ್ಯ ಪ್ರಶಸ್ತಿ (ಬಿರುದು) ನೀಡಿ ಸನ್ಮಾನಿಸಲಾಗುವುದು.
ಪ್ರಥಮವಾಗಿ ದಲಿತ,ಆದಿವಾಸಿ, ಮುಸ್ಲಿಂ ಸಮುದಾಯಗಳ ಮಹಿಳೆಯರ ಹಾಗೂ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ದೃಢವಾಗಿ ನಿಂತು ಕಾರ್ಯ ನಿರ್ವಹಿಸಿದ ಭಾರತದ ಮೊಟ್ಟ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ ಹೆಸರಿನಲ್ಲಿ ನಮ್ಮ ಸಮಾಜದಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಒಬ್ಬ ಅತ್ಯುತ್ತಮ ಮಹಿಳಾ ಶಿಕ್ಷಕಿಗೆ, ಸಾಧಕರ ಶ್ರೇಣಿಯಲ್ಲಿ ಫಾತಿಮಾ ಶೇಖ ರಾಜ್ಯ ಪ್ರಶಸ್ತಿ, ದೇಶದ ಬೆನ್ನೆಲುಬಾಗಿ ಅನ್ನ ನೀಡುವ ಶ್ರಮಜೀವಿ ಅತ್ಯುತ್ತಮ ರೈತನಿಗೆ ಈ ವರ್ಷದಿಂದ ಸಾಧಕರ ಶ್ರೇಣಿಯಲ್ಲಿ ಗೌರವ ಪೂರ್ವಕ ಪ್ರಗತಿಪರ ರೈತ ರಾಜ್ಯ ಪ್ರಶಸ್ತಿ ನೀಡಲು ಉದ್ದೇಶಿಸಿದೆ.ನಮ್ಮ ಮೂಲ ಉದ್ಯೋಗವಾದ ಗಾದಿ ತಯಾರಿಕೆಗೆ ಪ್ರೋತ್ಸಾಹ ನೀಡಲು ಜಿಲ್ಲೆಯಲ್ಲಿ ವಂಶ ಪಾರಂಪರಿಕವಾಗಿ ಇಂದೂ ಸಹ ಗಾದಿ ತಯಾರಿಕೆ ವೃತ್ತಿಯಲ್ಲಿ ತೊಡಗಿರುವ ಇಬ್ಬರನ್ನು ಗುರುತಿಸಿ ವೃತ್ತಿಗೆ ಜೀವಕಳೆ ತುಂಬಲು ನದಾಫ್ ಪಿಂಜಾರ ಕಾಯಕ ಜೀವಿ ಎಂದು ರಾಜ್ಯ ಪ್ರಶಸ್ತಿ ಪ್ರಧಾನ ನಡೆಯಲಿದೆ.
ನಮ್ಮ ಸಮಾಜ ಎಲ್ಲ ಜನಾಂಗಗಳಲ್ಲಿ ಭಾವೈಕ್ಯತೆಯಿಂದ ಬೆರೆತು ಕೋಮು ಸೌಹಾರ್ದತೆಗೆ ಪ್ರತೀಕವಾದ ಜನಾಂಗವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜವನ್ನು ಹೊರೆತು ಪಡಿಸಿ ಬೇರೆ ಜನಾಂಗದಲ್ಲಿ ಕೋಮು ಸೌಹಾರ್ದತೆಯಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹನೀಯರನ್ನು ಗುರುತಿಸಿ ಭಾವೈಕ್ಯ ಪ್ರಶಸ್ತಿ ನೀಡಿ ಅತ್ಯಂತ ಗೌರವ ಪೂರ್ವಕವಾಗಿ ಗೌರವಿಸಿ ಪುರಸ್ಕಾರ ಮಾಡಲಾಗುವುದು ಎಂದರು.ಸಮಾವೇಶಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಸಂತೋಷ ಲಾಡ್ ಮತ್ತು ಇತರ ಸಚಿವರು, ಶಾಸಕರು, ಹಾಗೂ ಇತರ ಗೌರವಾನ್ವಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಫ್. ಹಳ್ಯಾಳ, ರಾಜ್ಯ ಉಪಾಧ್ಯಕ್ಷ ಎಂ.ಎಚ್. ಬೆಂಡಿಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೆ, ಖಜಾಂಚಿ ಶಾಬುದ್ದೀನ ನೂರಭಾಷಾ, ಸಂಘಟನಾ ಕಾರ್ಯದರ್ಶಿ ಎಂ.ಎ. ಗಾಡಗೋಳಿ, ಎಸ್.ಎಚ್. ಮುದಕವಿ, ಪಿ.ಇಮಾಮಸಾಬ್, ಎಚ್.ಆರ್.ನದಾಫ, ತಾಜಬೀ ನದಾಫ, ಎಂ.ಬಿ.ನದಾಫ, ಎಸ್.ಎಂ. ಅಣ್ಣಿಗೇರಿ, ಐ.ಎನ್. ಹುಬ್ಬಳ್ಳಿ, ದಾವಲಸಾಬ್ ನದಾಫ, ರಮಜಾನಸಾಬ್ ಹಾದಿಮನಿ ಇದ್ದರು.