ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಅಂಗಳದಲ್ಲಿ ಹಂದರಗಂಬಕ್ಕೆ ಮಂಗಳವಾರ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಟ್ರಸ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪದಾಧಿಕಾರಿಗಳು, ಟ್ರಸ್ಟಿಗಳು ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಮಾ.19 ಮತ್ತು 20ರಂದು ನಡೆಯಲಿರುವ ಶ್ರೀ ದುಗ್ಗಮ್ಮನ ಜಾತ್ರೆಯ ಸಿದ್ಧತಾ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಕೊಟ್ಟರು.ಮುಖ್ಯ ಪುರೋಹಿತರಾದ ನಾಗರಾಜ ಜೋಯಿಸ್ ನೇತೃತ್ವದ ಪೂಜಾ ಕಾರ್ಯದಲ್ಲಿ ಹಂದರಗಂಬದ ಗುಂಡಿಗೆ ಹಾಲು, ತುಪ್ಪ, ಬೆಳ್ಳಿ, ಚಿನ್ನ ಅರ್ಪಿಸಿ, ಪದ್ಧತಿ, ಸಂಪ್ರದಾಯದಂತೆ ಹಂದರಗಂಬ ನೆಟ್ಟಿ, ಪೂಜಾ ಕಾರ್ಯ ನೆರವೇರಿಸುವ ಜೊತೆಗೆ ಜಾತ್ರೋತ್ಸವವನ್ನು ಸುಸೂತ್ರವಾಗಿ ನೆರವೇರಿಸಲು, ನಾಡು, ರಾಷ್ಟ್ರಾದ್ಯಂತ ಸಮೃದ್ಧ ಮಳೆ, ಬೆಳೆಗಾಗಿ ಶ್ರೀ ದೇವಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಇದರೊಂದಿಗೆ ಜಾತ್ರೆಗಾಗಿ ಅತ್ಯಾಕರ್ಷಕ ಪೆಂಡಾಲ್, ಸಾಂಸ್ಕೃತಿಕ ಕಾರ್ಯ ಕ್ರಮಗಳ ವೇದಿಕೆ ಸೇರಿ ಎಲ್ಲಾ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಂತಾಯಿತು.
ದೇಶದ ವಿವಿಧೆಡೆಯಿಂದ ಭಕ್ತರ ಆಗಮನ:ಈ ವೇಳೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪ್ರತಿ 2 ವರ್ಷಕ್ಕೊಮ್ಮೆ ನಗರ ದೇವತೆ ಶ್ರೀ ದುಗ್ಗಮ್ಮ ದೇವಿ ಜಾತ್ರೆ ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಮಾ.19 ಮತ್ತು 20ರಂದು ನಡೆಯುವ ಜಾತ್ರೆ ಸುಸೂತ್ರವಾಗಿ, ಸಾಂಗವಾಗಿ ನೆರವೇರಲು ಎಲ್ಲಾ ರೀತಿಯ ಸೌಲಭ್ಯ, ಸಹಕಾರ ನೀಡಲು ಜಿಲ್ಲಾಡಳಿತ, ಮಹಾ ನಗರ ಪಾಲಿಕೆಗೆ ಸೂಚನೆ ನೀಡಲಾಗಿದೆ. ಏ.2ರವರೆಗೆ ದುಗ್ಗಮ್ಮನ ಜಾತ್ರೆ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಯಿಂದಷ್ಟೇ ಅಲ್ಲ, ದೇಶದ ವಿವಿಧೆಡೆ, ವಿದೇಶದಿಂದಲೂ ದುರ್ಗಾಂಬಿಕಾ ದೇವಿ ಜಾತ್ರೆಗೆ ಭಕ್ತರು ಬರಲಿದ್ದಾರೆ ಎಂದರು.
ಜಾತ್ರೆಗೆ 1 ಕೋಟಿಗೂ ಅಧಿಕ ವೆಚ್ಚ:ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಸಾಗರದ ಯೋಗೇಶ್ ಪೆಂಡಾಲ್ ನಿರ್ಮಾಣ ಮಾಡಲಿದ್ದಾರೆ. ಈ ಬಾರಿ ಸುಂದರ, ವಿಶೇಷ ಪೆಂಡಾಲ್ ನಿರ್ಮಾಣವಾಗಲಿದೆ. ಜಾತ್ರೆಗೆ ₹1 ಕೋಟಿಗೂ ಅಧಿಕ ಖರ್ಚಾಗಬಹುದು. ಶ್ರೀ ದುರ್ಗಾಂಬಿಕಾ ದೇವಿಯ ಭಕ್ತರು ಉದಾರ ಮನಸ್ಸಿನಿಂದ ತಾಯಿಗೆ ಕಾಣಿಕೆ ನೀಡುತ್ತಾರೆ. ಮಾ.17ರ ಭಾನುವಾರ ಶ್ರೀ ದುರ್ಗಾಂಬಿಕಾ ದೇವಿಗೆ ಅಭಿಷೇಕ, ಕಂಕಣಧಾರಣೆ, ನಂತರ ರಾತ್ರಿ ಜಾತ್ರೆ ಸಾರು ಹಾಕಲಾಗುವುದು. 19ರ ಬೆಳಿಗ್ಗೆ ದಾಸೋಹದ ಮಹೋಪಕರಣ ಸಮಾರಂಭವಿದೆ. ರಾತ್ರಿ ಭಕ್ತಿ ಸಮರ್ಪಣೆ, 9ಕ್ಕೆ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿ ಮದ್ದಿನ ಪ್ರದರ್ಶನದೊಂದಿಗೆ ಬೆಳ್ಳಿ ರಥದಲ್ಲಿ ಶ್ರೀ ದುರ್ಗಾಂಬಿಕಾ ದೇವಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಫೆ.20ರಂದು ಪದ್ಧತಿ ಪ್ರಕಾರ ದೇವಿಯ ಮಹಾಪೂಜೆ, ಚರಗ ನಡೆಯಲಿದೆ ಎಂದರು.
ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಸದಸ್ಯರಾದ ಜಿ.ಡಿ.ಪ್ರಕಾಶ, ಕೆ.ಚಮನ್ ಸಾಬ್, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಮಾಲತೇಶರಾವ್ ಜಾಧವ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಮುಖಂಡರಾದ ದಿನೇಶ ಕೆ.ಶೆಟ್ಟಿ, ಸಮರ್ಥ ಎಂ.ಶಾಮನೂರು, ಮುದೇಗೌಡ್ರ ಗಿರೀಶ, ಉಮೇಶ ಸಾಳಂಕಿ, ಹನುಮಂತರಾವ್ ಸಾವಂತ್, ಸತ್ಯನಾರಾಯಣ ರಾವ್, ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಎಚ್.ಸಾಗರ್, ರಾಕೇಶ, ಕವಿರಾಜ, ಬೊಮ್ಮಜ್ಜರ ಚನ್ನಬಸಪ್ಪ, ಗುಡ್ಡಣ್ಣರ ಶಿವಶಂಕರ, ಎನ್.ನೀಲಗಿರಿಯಪ್ಪ, ಆನಂದ ಇಟ್ಟಿಗುಡಿ ಇತರರಿದ್ದರುಮಾ.22ರಿಂದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ: ಸಚಿವ ಎಸ್ಸೆಸ್ಸೆಂಹಳೆ ಭಾಗದ ಪ್ರತಿ ಮನೆಯಲ್ಲೂ ತಿಂಗಳುಗಟ್ಟಲೇ ಸಿದ್ಧತೆ ನಡೆಯುತ್ತವೆ. ಲಕ್ಷಾಂತರ ಜನರು ಸಡಗರ, ಸಂಭ್ರಮದಿಂದ ಜಾತ್ರೆ ಆಚರಿಸುತ್ತಾರೆ. ಜಾತ್ರೆಗೆ ಬಂದ ಜನರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ, ಉರುಳು ಸೇವೆ, ದೀಡು ಸೇವೆ ಮಾಡುವವರಿಗೆ ಎಲ್ಲಾ ರೀತಿಯ ಸೌಲಭ್ಯ, ಸಹಕಾರ ಹಾಗೂ ವಿಶೇಷವಾಗಿ ಸ್ವಚ್ಛತೆಗೆ ಒತ್ತು ನೀಡಲು ಸೂಚನೆ ನೀಡಲಾಗಿದೆ. ಜಾತ್ರೆ ಅಂಗವಾಗಿ ಮಾ.22ರಿಂದ 24ರವರೆಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ದುಗ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ಏ.5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಕುರಿ ಕಾಳಗವೂ ನಡೆಯಲಿದೆ. ಜಾತ್ರೆಯು ಶಾಂತಿ, ಸಡಗರ, ಸಂಭ್ರಮ, ವಿಜೃಂಭಣೆಯಿಂದ ನಡೆಯಲು ಸಾರ್ವಜನಿಕರು, ಮಾಧ್ಯಮದವರು ಸಹಕಾರ ನೀಡಬೇಕು ಎಂದು ಎಸ್ಸೆಸ್ ಮಲ್ಲಿಕಾರ್ಜುನ ಮನವಿ ಮಾಡಿದರು. ...........ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಾ.19 ಮತ್ತು 20ರಂದು ನಡೆಯಲಿದೆ. ಜಾತ್ರೆಗಾಗಿ ರಾಜ್ಯ, ರಾಷ್ಟ್ರ, ವಿದೇಶದಿಂದಲೂ ಲಕ್ಷಾಂತರ ಜನ ಭಕ್ತರು ಆಗಮಿಸುವರು. ಜಾತ್ರೆ ಅಂಗವಾಗಿ ಬಯಲು ಜಂಗೀ ಕುಸ್ತಿ ಪಂದ್ಯಾವಳಿ, ಕುರಿ ಕಾಳಗ, ನಿತ್ಯವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷರು, ಶಾಸಕರು, ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮಿತಿ