ಹಂಪಿ ಉತ್ಸವ ಸಿದ್ಧತೆ ಬಲು ಜೋರು

| Published : Jan 13 2024, 01:37 AM IST / Updated: Jan 13 2024, 04:02 PM IST

ಸಾರಾಂಶ

ಹಂಪಿ ಉತ್ಸವಕ್ಕೆ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಾಲಯ ಆವರಣ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಇಡೀ ಜಗತ್ತಿಗೆ ಉಣಬಡಿಸಲಿರುವ ಹಂಪಿ ಉತ್ಸವ ಫೆ. 2, 3 ಮತ್ತು 4ರಂದು ಮೂರು ದಿನಗಳವರೆಗೆ ನಡೆಯಲಿದ್ದು, ಉತ್ಸವಕ್ಕೆ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ.

ಹಂಪಿಗೆ ಈ ಬಾರಿ ಉತ್ಸವಕ್ಕೆ ಮೂರು ದಿನಗಳಲ್ಲಿ ಲಕ್ಷಾಂತರ ಜನರು ಹರಿದು ಬರುವ ನಿರೀಕ್ಷೆ ಇದ್ದು, ಇದಕ್ಕಾಗಿ ತಯಾರಿಯೂ ಜೋರಾಗಿ ನಡೆಯತ್ತಿದೆ.

ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಈಗಾಗಲೇ ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದ್ದು, ಗಾಯತ್ರಿಪೀಠದ ಬಳಿಯ ಬಯಲು ಜಾಗದಲ್ಲಿ ಭವ್ಯ ವೇದಿಕೆ ನಿರ್ಮಾಣಗೊಳ್ಳಲಿದೆ. ಈ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ. 2ರಂದು ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಾಗಾಗಿ ಗಾಯತ್ರಿ ಪೀಠ ವೇದಿಕೆ ಬಳಿ ಭರದ ಸಿದ್ಧತೆ ನಡೆದಿದೆ. ಗಿಡಗಂಟಿ, ಕಸವನ್ನು ತೆರವುಗೊಳಿಸಲಾಗುತ್ತಿದ್ದು, ವೇದಿಕೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಹಂಪಿ ಉತ್ಸವಕ್ಕೆ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಾಲಯ ಆವರಣ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ನಾಲ್ಕು ವೇದಿಕೆಗಳಲ್ಲಿ ದೇಶ, ವಿದೇಶಿ ಹಾಗೂ ಸ್ಥಳೀಯ ಕಲಾವಿದರು ಕಲೆಯನ್ನು ಉಣಬಡಿಸಲಿದ್ದಾರೆ. ಹಾಗಾಗಿ ವೇದಿಕೆಗಳ ನಿರ್ಮಾಣಕ್ಕೆ ಭರದ ಸಿದ್ಧತೆಯೂ ನಡೆದಿದೆ.

ಪಾರ್ಕಿಂಗ್‌ಗೆ ಆದ್ಯತೆ:
ಹಂಪಿ ಉತ್ಸವಕ್ಕೆ ಒನ್‌ವೇ ಹಾಗೂ ಟುವೇ ಮಾರ್ಗಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತ ಈಗಾಗಲೇ ಸಮಾಲೋಚನೆ ನಡೆಸಿ ಮಾರ್ಗಗಳನ್ನು ಗುರುತಿಸುತ್ತಿದೆ. ಈಗ ರೈತರು ಫಸಲನ್ನು ಹಾಕಿರುವುದರಿಂದ ಪಾರ್ಕಿಂಗ್‌ನದ್ದೇ ಸಮಸ್ಯೆಯಾಗಿದೆ. ಹಾಗಾಗಿ ರೈತರ ಜತೆಗೆ ಸಮಾಲೋಚನೆ ನಡೆಸಿ 35ರಿಂದ 40 ಎಕರೆ ಜಾಗವನ್ನು ಕಡ್ಡಿರಾಂಪುರ ಮಾರ್ಗದಲ್ಲಿ ಪಡೆಯಲಾಗುತ್ತಿದೆ. ಈಗಾಗಲೇ ರೈತರ ಜತೆಗೆ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಹಾಗೂ ಎಸ್ಪಿ ಶ್ರೀಹರಿಬಾಬು ಅವರು ಸಮಾಲೋಚನೆ ನಡೆಸಿದ್ದಾರೆ. ರೈತರು ಈಗಾಗಲೇ 25ರಿಂದ 30 ಎಕರೆಯಷ್ಟು ಜಾಗ ನೀಡಲು ಮುಂದಾಗಿದ್ದಾರೆ. ಇನ್ನಷ್ಟು ಜಾಗ ದೊರೆತರೆ ಪಾರ್ಕಿಂಗ್‌ ಸಮಸ್ಯೆಗೆ ಇತಿಶ್ರೀ ಹಾಕಬಹುದು ಎಂಬುದು ಜಿಲ್ಲಾಡಳಿತದ ಎಣಿಕೆಯಾಗಿದೆ.

ಹೊಸಪೇಟೆಯಿಂದ ಬರುವ ವಾಹನಗಳನ್ನು ಕಡ್ಡಿರಾಂಪುರ ಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಬೇಕಿದೆ. ಬೈಕ್‌, ಕಾರುಗಳನ್ನು ಒಂದೆಡೆ ನಿಲುಗಡೆ ಮಾಡಲು ವ್ಯವಸ್ಥೆ ಮಾಡುವ ಹೊಣೆಗಾರಿಕೆ ಈಗ ಜಿಲ್ಲಾಡಳಿತದ ಮೇಲಿದೆ. ಹಾಗಾಗಿ ಜಿಲ್ಲಾಧಕಾರಿ ಎಂ.ಎಸ್‌. ದಿವಾಕರ್ ಹಾಗೂ ಎಸ್ಪಿ ಶ್ರೀಹರಿಬಾಬು ಅವರು ಹಂಪಿಗೆ ದಿನಕ್ಕೊಮ್ಮೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಖುದ್ದು ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡುತ್ತಿದ್ದಾರೆ.

ಜಿ- 20 ಶೃಂಗಸಭೆ ಅನುಭವಧಾರೆ: ಕಳೆದ ವರ್ಷದ ಜುಲೈನಲ್ಲಿ ಹಂಪಿಯಲ್ಲಿ ಜಾಗತಿಕ ಮಟ್ಟದ ಜಿ- 20 ಶೃಂಗಸಭೆ ಎರಡು ಅವತರಣಿಕೆಯಲ್ಲಿ ನಡೆದಿದೆ. ಈ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ ಅನುಭವ ವಿಜಯನಗರ ಜಿಲ್ಲಾಡಳಿತಕ್ಕೆ ಇದೆ. ಹಾಗಾಗಿ ಹಂಪಿ ಉತ್ಸವವನ್ನು ಜಾಗತಿಕ ಮಟ್ಟವನ್ನು ಸೆಳೆಯುವ ಮಾದರಿಯಲ್ಲಿ ನಡೆಸಲು ಈಗಾಗಲೇ ಭರದ ಸಿದ್ಧತೆಯೂ ನಡೆದಿದೆ. ಹಂಪಿಯ ಸೊಬಗನ್ನು ಸಹಜ ಸ್ಥಿತಿಯಲ್ಲೇ ಉಣಬಡಿಸಿದ ಕೀರ್ತಿ ಶೃಂಗಸಭೆಗೆ ಇದೆ. ಅದೇ ಶೈಲಿಯಲ್ಲಿ ಹಂಪಿಯ ಸಹಜ ಸೌಂದರ್ಯವನ್ನು ಇಡೀ ವಿಶ್ವಕ್ಕೆ ಉತ್ಸವದ ಮೂಲಕ ಅನಾವರಣಗೊಳಿಸುವ ಕಾರ್ಯಸೂಚಿಯನ್ನು ವಿಜಯನಗರ ಜಿಲ್ಲಾಡಳಿತ ಹಾಕಿಕೊಂಡಿದೆ.

ಭರದ ಸಿದ್ಧತೆ: ಹಂಪಿಯ ಗಾಯತ್ರಿಪೀಠ ವೇದಿಕೆಯಲ್ಲಿ ಈಗಾಗಲೇ ಎಲ್ಲ ಬಗೆಯ ಸಿದ್ಧತೆ ನಡೆದಿದೆ. ವೇದಿಕೆ ನಿರ್ಮಾಣಕ್ಕಾಗಿ ಜೆಸಿಬಿಯಂತ್ರ ಬಳಸಿ ಸ್ವಚ್ಛತಾ ಕಾರ್ಯವನ್ನು ನಿರ್ಮಿತಿ ಕೇಂದ್ರದಿಂದ ಆರಂಭಿಸಲಾಗಿದೆ. ಹಂಪಿಯಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯದ ವರದಿಯನ್ನು ಸ್ವತಃ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಪಡೆಯುತ್ತಿದ್ದಾರೆ. ಹಾಗಾಗಿ ಉತ್ಸವದ ವೇದಿಕೆ ನಿರ್ಮಾಣಗೊಳ್ಳುವ ಸ್ಥಳಗಳಲ್ಲಿ ನಿರ್ಮಿತಿ ಕೇಂದ್ರದಿಂದ ದಿನಚರಿ ಹಾಕಿಕೊಂಡು ಕೆಲಸ ಮಾಡಲಾಗುತ್ತಿದೆ.

ಇನ್ನೊಂದೆಡೆಯಲ್ಲಿ ಹಂಪಿಯ ನೆಲಸ್ತರದ ಶಿವ ದೇವಾಲಯದ ಬಳಿ ಪಾರ್ಕಿಂಗ್‌ಗಾಗಿ ಗಿಡ- ಗಂಟಿಗಳನ್ನು ಭಾರತೀಯ ಪುರಾತತ್ವ ಇಲಾಖೆಯ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ. ಹಂಪಿಯ ನೆಲದಲ್ಲಿ ಉತ್ಸವಕ್ಕೆ ಸಿದ್ಧತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಂಗಲ್‌ ಕಟಿಂಗ್ ಮಾಡಲಾಗುತ್ತಿದೆ. ಇದರಿಂದ ಸ್ವಚ್ಛತಾ ಅಭಿಯಾನ ತನ್ನಿಂದ ತಾನೇ ಹಂಪಿಯಲ್ಲಿ ನಡೆದಿದೆ.

ಹಂಪಿ ಉತ್ಸವಕ್ಕೆ ದೇಶ- ವಿದೇಶಿ ಕಲಾವಿದರು ಹಾಗೂ ಖ್ಯಾತನಾಮ ಕಲಾವಿದರು ಆಗಮಿಸುವ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಜನರು ಹರಿದು ಬರುವ ಸಾಧ್ಯತೆ ಇದೆ. ಈ ಉತ್ಸವ ಜನೋತ್ಸವವನ್ನಾಗಿಸಲು ವಿಜಯನಗರ ಜಿಲ್ಲಾಡಳಿತ ಈಗಿನಿಂದಲೇ ತಯಾರಿ ನಡೆಸಿದೆ.

ಧ್ವನಿ ಮತ್ತು ಬೆಳಕಿಗೆ ಕೇಂದ್ರಕ್ಕೆ ಪತ್ರ
ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಗಜಶಾಲೆ ಬಳಿ ನಡೆಸಲು ವಿಜಯನಗರ ಜಿಲ್ಲಾಡಳಿತ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಹಂಪಿಯಲ್ಲಿ ನಡೆಸುವ ಈ ಮೂಲಕ ಈ ನೆಲದ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜಿಲ್ಲಾಡಳಿತ ಮುಂದಾಗಿದೆ. ಜೀವಂತ ಆನೆಗಳನ್ನು ಕೂಡ ಈ ಕಾರ್ಯಕ್ರಮದಲ್ಲಿ ಬಳಕೆ ಮಾಡಲಾಗುತ್ತದೆ. ಹಾಗಾಗಿ ಕೇಂದ್ರದಿಂದ ಹಸಿರುನಿಶಾನೆ ದೊರೆತರೆ, ಈ ಕಾರ್ಯಕ್ರಮ ಹಂಪಿ ಉತ್ಸವಕ್ಕೆ ಮತ್ತಷ್ಟು ಕಳೆ ತರಲಿದೆ.

ಕೇಂದ್ರಕ್ಕೆ ಪತ್ರ: ಹಂಪಿ ಉತ್ಸವಕ್ಕೆ ಎಲ್ಲ ತಯಾರಿಯೂ ನಡೆಸಲಾಗುತ್ತಿದೆ. ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಸಿದ್ಧತಾ ಕಾರ್ಯ ಆರಂಭಗೊಂಡಿದ್ದು, ಉತ್ಸವದ ಹೊತ್ತಿಗೆ ಎಲ್ಲವೂ ಸಜ್ಜುಗೊಳ್ಳಲಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.