ತಾಲೂಕಿನ ಸಾಣೇಹಳ್ಳಿಯ ತರಳಬಾಳು ಮಠದಲ್ಲಿ ರಾಷ್ಟ್ರೀಯ ನಾಟಕೋತ್ಸವದ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗರಂಗಭೂಮಿಯ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಪರಂಪರೆಗೆ ಹೆಸರಾಗಿರುವ ಸಾಣೇಹಳ್ಳಿಯಲ್ಲಿ ನ.1 ರಿಂದ 6ರವರೆಗೆ ನಡೆಯಲಿರುವ ಪ್ರತಿಷ್ಠಿತ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ. ಆರು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಉತ್ಸವಕ್ಕೆ ಆಗಮಿಸುವ ಕಲಾಭಿಮಾನಿಗಳು ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದರು.

ಸಾಣೇಹಳ್ಳಿಯ ಶ್ರೀಮಠದಲ್ಲಿ ಶುಕ್ರವಾರ ನಡೆದ ನಾಟಕೋತ್ಸವದ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾಟಕೋತ್ಸವದ ಯಶಸ್ಸಿಗೆ ಸಂಘಟಿತ ಪ್ರಯತ್ನ ಅಗತ್ಯ. ಉತ್ಸವದ ಅವಧಿಯಲ್ಲಿ ಸಾಣೇಹಳ್ಳಿ ಸ್ವಚ್ಛವಾಗಿ ಕಂಗೊಳಿಸಬೇಕು. ಸಾರ್ವಜನಿಕರು ಮತ್ತು ಕಲಾಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ಬಾರಿ ‘ಗುರವಾದಡೂ ಕಾಯಕದಿಂದವೆ ಜೀವನ್ಮುಕ್ತಿ’ ಎಂಬ ಆಶಯದೊಂದಿಗೆ ಜನರ ಮನಸ್ಸನ್ನು ಚಿಂತನೆಗೆ ಒಳಪಡಿಸುವ, ಸೃಜನಾಶೀಲತೆಯನ್ನು ಹುಟ್ಟು ಹಾಕುವ, ಬಂಡಾಯದ ಗುಣ ಬೆಳಸುವ, ಸ್ವ ವಿಮರ್ಶೆ ಮಾಡಿಕೊಳ್ಳುವ ಹಲವು ಬಗೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವಂತಹ ನಾಟಕ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ.

ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿದ್ದು ಎಸ್‌.ಎಸ್‌.ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯ ವಿಚಾರ ಸಂಕಿರಣ, ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ.

ನಾಟಕೋತ್ಸವ ಪ್ರಮುಖವಾಗಿ ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ, ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನ, ವಚನಗೀತೆ, ನೃತ್ಯ ರೂಪಕಗಳು, ಉಪನ್ಯಾಸ, ಅಭಿನಂದನೆ, ಆಶೀರ್ವಚನ, ನಾಟಕ ಪ್ರದರ್ಶನಗಳನ್ನು ಒಳಗೊಂಡಿದೆ ಎಂದರು.

*ಸ್ವಚ್ಛತೆ, ಶಿಸ್ತಿಗೆ ಆದ್ಯತೆ:

ನಾಟಕೋತ್ಸವದ ಆರು ದಿನಗಳ ಕಾಲ ಸಾಣೇಹಳ್ಳಿ ವಲಯದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಾತಾವರಣದ ಪಾವಿತ್ರ್ಯ ಕಾಪಾಡುವ ದೃಷ್ಟಿಯಿಂದ ಮದ್ಯಪಾನ ಮತ್ತು ಧೂಮಪಾನವನ್ನು ನಿಷೇಧಿಸಿ, ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಬೇಕು. ವಿವಿಧ ಭಾಗಗಳಿಂದ ಪ್ರತಿದಿನ ಆಗಮಿಸುವ ಸಾವಿರಾರು ಕಲಾಭಿಮಾನಿಗಳು ಮತ್ತು ಭಕ್ತರಿಗೆ ರುಚಿಕರ ಹಾಗೂ ಶುಚಿಯಾದ ಪ್ರಸಾದವನ್ನು ವ್ಯವಸ್ಥಿತವಾಗಿ ವಿತರಿಸಬೇಕು. ಉತ್ಸವಕ್ಕೆ ಆಗಮಿಸುವ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗದಂತೆ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ಗಣ್ಯರು ಮತ್ತು ಅತಿಥಿಗಳಿಗೆ ಆತಿಥ್ಯ ನೀಡುವಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜವಾಬ್ದಾರಿ ಹಂಚಿಕೆಗೆ ಸೂಚನೆ:

ನಾಟಕೋತ್ಸವದ ವಿವಿಧ ವಿಭಾಗಗಳ ನಿರ್ವಹಣೆಗೆ ನಾಲ್ಕೈದು ಸದಸ್ಯರನ್ನೊಳಗೊಂಡ ಪ್ರತ್ಯೇಕ ಸಮಿತಿಗಳನ್ನು ರಚಿಸಬೇಕು. ಪ್ರತಿಯೊಬ್ಬರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸ್ಥಳೀಯ ಮುಖಂಡರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಮದ ಮುಖಂಡರಾದ ಎ.ಸಿ.ಚಂದ್ರಪ್ಪ, ಸಿದ್ದಪ್ಪ, ಓಂಕಾರಪ್ಪ, ಮಲ್ಲಿಕಾರ್ಜುನ, ಚಂದ್ರಶೇಖರಯ್ಯ, ಎಂಜಿನಿಯರ್ ವಿಶ್ವನಾಥ್ ಸಾಣೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು ಹಾಗೂ ಹೊಸದುರ್ಗ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು. ನಾಟಕೋತ್ಸವದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಿಕ್ಷಕ ಪ್ರಕಾಶ್ ಸ್ವಾಗತಿಸಿದರು. ಕಲಾಸಂಘದ ಕಾರ್ಯದರ್ಶಿ ಎಸ್.ಕೆ. ಪರಮೇಶ್ವರಯ್ಯ ನಿರೂಪಿಸಿದರು.