ಸಾರಾಂಶ
ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಎಂ.ಎಸ್. ದಿವಾಕರ್
ಕನ್ನಡಪ್ರಭ ವಾರ್ತೆ ಹೊಸಪೇಟೆಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಶ್ರೀಚಿರಬಿ ಮೂಗಬಸವೇಶ್ವರ ರಥೋತ್ಸವ ಆ. 18 ರಂದು ಅದ್ಧೂರಿಯಾಗಿ ಜರುಗಿಸಲು ನಿರ್ಣಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀಚಿರಬಿ ಮೂಗಬಸವೇಶ್ವರ ರಥೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದ ಅವರು, ಕಾರಣಾಂತರಗಳಿಂದ 18 ವರ್ಷಗಳಿಂದ ಆಚರಣೆ ಸ್ಥಗಿತಗೊಂಡಿದ್ದ ರಾಂಪುರ ಗ್ರಾಮದ ಶ್ರೀಚಿರಬಿ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರೆಯು ಅಪಾರ ಭಕ್ತಗಣದ ಬೇಡಿಕೆಯಂತೆ ಸಂಪ್ರದಾಯಬದ್ಧವಾಗಿ ಆಚರಿಸಲು ಕ್ರಮವಹಿಸಲಾಗಿದೆ ಎಂದರು.ರಾಂಪುರ ಕಂದಾಯ ಗ್ರಾಮವಾಗಿರುವ ಹಿನ್ನೆಲೆ ಶ್ರೀಚಿರಬಿ ಮೂಗಬಸವೇಶ್ವರ ರಥೋತ್ಸವ ರಾಂಪುರ ಎಂದು ಪ್ರಕಟಣೆಗಳಲ್ಲಿ ನಮೂದಿಸಬೇಕು. ರಥೋತ್ಸವದ ಕಾರ್ಯಕ್ಕೆ ಸ್ಥಳೀಯ ಆಯಾಗಾರರನ್ನು ಜಿಲ್ಲಾಡಳಿತದಿಂದ ಅರ್ಜಿಗಳನ್ನು ಅಹ್ವಾನಿಸುವ ಮೂಲಕ ಆಯ್ಕೆ ಮಾಡಲಾಗುವುದು. ಆಯಾಗಾರರು ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸ್ಥಳೀಯ ಗ್ರಾಮಸ್ಥರು, ಭಕ್ತರು ಸಹಕಾರದಿಂದ ಮಾತ್ರವೇ ಅದ್ಧೂರಿ ಆಚರಣೆ ಸಾಧ್ಯ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಾತ್ರೋತ್ಸವದ ಅಗತ್ಯ ಮೂಲಸೌಕರ್ಯಗಳನ್ನು ಭಕ್ತರಿಗೆ ಒದಗಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ಶ್ರೀಚಿರಬಿ ಮೂಗಬಸವೇಶ್ವರ ರಥೋತ್ಸವದ ಸಿದ್ಧತೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಮೂಲ ಸೌಕರ್ಯಕ್ಕೆ ಒತ್ತು ಕೊಡಿ:
ತಾಪಂ ಇಒ ಡಾ. ಆನಂದ ಕುಮಾರ್ ಮಾತನಾಡಿ, ಜಾತ್ರೆಯ ಸಿದ್ಧತೆಯಲ್ಲಿ ಕುಡಿವ ನೀರು, ರಸ್ತೆ ಸಂಪರ್ಕ, ವಿದ್ಯುತ್ ದೀಪಗಳ ವ್ಯವಸ್ಥೆ, ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರಿಗೆ ಇಲಾಖೆಯಿಂದ ಭಕ್ತರು ಆಗಮಿಸಲು ಅಗತ್ಯ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಜಾತ್ರೋತ್ಸವದ ಯಶಸ್ವಿಗೆ ಸಾರ್ವಜನಿಕರು, ಸ್ಥಳೀಯ ಗ್ರಾಮಸ್ಥರು, ಭಕ್ತರು ಸಹಕರಿಸಬೇಕು ಎಂದರು.ಈ ವೇಳೆ ಧಾರ್ಮಿಕ ದತ್ತಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಕೊಟ್ಟೂರು ತಹಸೀಲ್ದಾರ ಜಿ.ಕೆ. ಅಮರೇಶ್, ಕೂಡ್ಲಿಗಿ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಲಮಾಣಿ, ಡಿಎಚ್‌ಓ ಡಾ. ಎಲ್.ಆರ್. ಶಂಕರ್ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ರಾಂಪುರ ಮತ್ತು ಚಿರಬಿ ಗ್ರಾಮಸ್ಥರು, ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.